ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,79,723 (1.79 ಲಕ್ಷ)ಮಂದಿಗೆ ಹೊಸದಾಗಿ ಕೊರೋನ ಸೋಂಕು ದೃಢವಾಗಿದ್ದು, 146 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದರೊಂದಿಗೆ ದೇಶದಲ್ಲಿ ಕೊರೋನದಿಂದ ಮೃತಪಟ್ಟವರ ಸಂಖ್ಯೆ 4,83,936(4.8ಲಕ್ಷ) ಆಗಿದೆ. 13.29 ಶೇಕಡ ಹೊಸದಾಗಿ ಕೊರೋನ ದೃಢಪಡುತ್ತಿರುವ ವಿಷಯ ಆತಂಕಕಾರಿ.
ಮಹಾರಾಷ್ಟ್ರದಲ್ಲಿ 44,388, ಪಶ್ಚಿಮ ಬಂಗಾಳದಲ್ಲಿ 24,287 ಪ್ರಕರಣಗಳು, ದಿಲ್ಲಿಯಲ್ಲಿ 22,751 ಪ್ರಕರಣಗಳು, ಕರ್ನಾಟಕದಲ್ಲಿ 12,000 ಪ್ರಕರಣಗಳು ಹೊಸದಾಗಿ ವರದಿಯಾಗಿದೆ. ದೇಶದಲ್ಲಿ ಒಮಿಕ್ರಾನ್ ದೃಢಪಟ್ಟಿರವವರ ಸಂಖ್ಯೆ 4033ಕ್ಕೆ ಏರಿಕೆಯಾಗಿದೆ. ಬೂಸ್ಟರ್ ಡೋಸ್ ಕೊಡುವ ಕಾರ್ಯವನ್ನು ಆರಂಭಿಸಲಾಗಿದ್ದು ಆರೋಗ್ಯ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂಬುದಾಗಿ ವರದಿಯಾಗಿದೆ.
60 ವರ್ಷ ಮೇಲ್ಪಟ್ಟವರು ಮತ್ತು ಆರೋಗ್ಯ ಕಾರ್ಯಕರ್ತರು ಮತ್ತು ಇತರ ಗಂಭೀರ ಅನಾರೋಗ್ಯ ಇರುವವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಇದಕ್ಕೆ ಮುಂಚಿತ ನೋಂದಣಿಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿತ್ತು. ಎರಡನೇ ಡೋಸ್ ತೆಗೆದುಕೊಂಡು ಒಂಬತ್ತು ತಿಂಗಳ ಬಳಿಕ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಮೂರನೇ ಬಾರಿಯೂ ಈ ಹಿಂದೆ ಅವರಿಗೆ ಕೊಟ್ಟಿರುವ ಲಸಿಕೆಯನ್ನೇ ನೀಡುವುದು. ವ್ಯಾಕ್ಸಿನ್ ತೆಗೆದುಕೊಂಡಿರುವ ಸರ್ಟಿಫಿಕೆಟ್ ಬೂಸ್ಟರ್ ಡೋಸ್ ಪಡೆಯುವವರಲ್ಲಿರಬೇಕು.
ಇದೇ ವೇಳೆ ಸೈಪ್ರಸ್ನಲ್ಲಿ ಕೊರೋನ ವೈರಸ್ನ ಡೆಲ್ಟಾ ಮತ್ತು ಒಮಿಕ್ರಾನ್ ಎರಡು ಸೇರಿಕೊಂಡಿರುವುದು ಪತ್ತೆಯಾಗಿದೆ. ಡೆಲ್ಟಾಕ್ರಾನ್ ಎಂದು ಹೆಸರಿಸಲಾಗಿದ್ದು ಸದ್ಯ 25 ಮಂದಿಯಲ್ಲಿ ಇದು ಕಂಡು ಬಂದಿದೆ. ಇದರ ತೀವ್ರತೆ ಮತ್ತು ಹರಡುವಿಕೆಯ ಸಾಧ್ಯತೆಯ ಬಗ್ಗೆ ಈಗ ಅಧ್ಯಯನ ನಡೆಯುತ್ತಿದೆ. ಇದುವರೆಗೆ ಡೆಲ್ಟಾಕ್ರಾನ್ ರೂಪಾಂತರದ ಬಗ್ಗೆ ವಿಶ್ವ ಆರೋಗ್ಯ ಸಂಘಟನೆಯು ಪ್ರತಿಕ್ರಿಯಿಸಿಲ್ಲ.












