ಸನ್ಮಾರ್ಗ ವಾರ್ತೆ
ಮಂಗಳೂರು: ಜನರು ಮೊಬೈಲ್ ಮೂಲಕ ಲೋನ್ ಆ್ಯಪ್ ಗಳನ್ನು ಬಳಸಬಾರದು. ಈ ಬಗ್ಗೆ ಎಚ್ಚರ ವಹಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮನವಿ ಮಾಡಿದ್ದಾರೆ.
ಮಂಗಳೂರಲ್ಲಿಂದು ಮಾತನಾಡಿದ ಅವರು, ಎರಡು ದಿನಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಶಾಂತ್ ಕುಮಾರ್ ಎಂಬ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಲೋನ್ ಆ್ಯಪ್ನವರ ಕಿರುಕುಳವೇ ಕಾರಣ ಎಂದು ತಿಳಿದುಬಂದಿದೆ.
ಚೀನಾ ಮೂಲದ ಈ ಲೋನ್ ಆ್ಯಪ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. ದೇಶದಲ್ಲಿ ಸುಮಾರು 600ಕ್ಕೂ ಅಧಿಕ ಇಂತಹ ಲೋನ್ ಆ್ಯಪ್ಗಳಿದ್ದು, ಇದನ್ನು ಇನ್ಸ್ಟಾಲ್ ಮಾಡುವಾಗ ಅನೇಕ ಷರತ್ತುಗಳನ್ನು ವಿಧಿಸುತ್ತಾರೆ. ಅಂದರೆ ಬಳಕೆದಾರರ ಬೆತ್ತಲೆ ಫೋಟೊ ಪಡೆದುಕೊಳ್ಳುವುದು, ಕಾಂಟಾಕ್ಟ್, ಫೋಟೊ, ವೀಡಿಯೋ, ಕ್ಯಾಮರಾ ಇತ್ಯಾದಿಯನ್ನು ಮುಕ್ತವಾಗಿ ಪಡೆದುಕೊಳ್ಳುವ ಆಪ್ಷನ್ ಕೇಳಲಾಗುತ್ತದೆ. ಎಲ್ಲದಕ್ಕೂ “ಎಸ್ ” ಅಂದರೆ ಮಾತ್ರ ಇನ್ಸ್ಟಾಲ್ ಪೂರ್ತಿಗೊಳಿಸಲು ಸಾಧ್ಯವಿದೆ. ಆ ಬಳಿಕ 3 ಸಾವಿರ ರೂ.ನಿಂದ 6 ಸಾವಿರ ರೂಪಾಯಿಯವರೆಗೆ ಸಾಲ ನೀಡುತ್ತಾರೆ. ಆದರೆ ಇದಕ್ಕೆ ಶೇಕಡಾ 30-60ರವರೆಗೆ ಬಡ್ಡಿ ವಿಧಿಸುತ್ತಾರೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಒಂದು ವೇಳೆ ಸಾಲದ ಮೊತ್ತವನ್ನು ಹಿಂದಿರುಗಿಸದಿದ್ದರೆ ಬೆತ್ತಲೆ ಫೋಟೊವನ್ನು ಬಳಕೆದಾರರ ಕಾಂಟಾಕ್ಟ್ ಲಿಸ್ಟ್ ನಲ್ಲಿದ್ದರಿಗೆ ಕಳಿಸುವ ಮತ್ತು ಆ ಲಿಸ್ಟ್ ನಲ್ಲಿದ್ದವರಿಗೆ ಬಳಕೆದಾರ ಪಡೆದ ಸಾಲ ಮರಳಿಸಲಿಲ್ಲ ಎಂಬ ಮಾಹಿತಿ ಹಂಚಿ ಮಾನ ಕಳೆಯುವ ಮತ್ತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಹೇಳಿ ನಕಲಿ ಎಫ್ಐಆರ್ ಪ್ರತಿ ಕಳಿಸಿ ಬೆದರಿಸಲಾಗುತ್ತದೆ. ಮಾನ ಮರ್ಯಾದೆಗೆ ಹೆದರಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಮೊಬೈಲ್ ಮೂಲಕ ಲೋನ್ ಆ್ಯಪ್ ಗಳನ್ನು ಬಳಸಬಾರದು. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.












