ಸನ್ಮಾರ್ಗ ವಾರ್ತೆ
ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯ ಸ್ಟೇಟ್ಬ್ಯಾಂಕ್ನಿಂದ ಜ್ಯೋತಿ ಸರ್ಕಲ್, ಮಲ್ಲಿಕಟ್ಟೆ, ನಂತೂರು, ಬಿಕರ್ನಕಟ್ಟೆ, ಕೈಕಂಬ, ಮರೋಳಿ, ಪಡೀಲ್, ಅಡ್ಯಾರ್ ಕಡೆಗೆ ಸಾರ್ವಜನಿಕರು, ಸರಕಾರಿ, ಖಾಸಗಿ ನೌಕರರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರೂಟ್ ನಂಬರ್ 30, 30ಬಿ ಹಾಗೂ 37 ಒಟ್ಟು 5 ಬಸ್ಗಳು 40 ವರ್ಷಗಳಿಂದ ಸಂಚರಿಸುತ್ತಿದ್ದು, ಕೋವಿಡ್ ಸಂಕಷ್ಟದ ಬಳಿಕವು ಇತರೆ ರೂಟ್ಗಳಲ್ಲಿ ಸಿಟಿಬಸ್ ಓಡುತ್ತಿದ್ದರೂ ಈ ರೂಟ್ ನಲ್ಲಿ ಸರಿಯಾಗಿ ಬಸ್ ನ ಓಡಾಟ ಇಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.
2019ನೇ ವರ್ಷದಲ್ಲಿ ಹೆಚ್ಚಿನ ತಿಂಗಳುಗಳಲ್ಲಿ ಬಸ್ಗಳು ಸರಿಯಾಗಿ ಓಡದೇ ಕೇವಲ ಒಂದೆರಡು ಬಸ್ಗಳು ಮಾತ್ರ ಖುಷಿ ಬಂದಂತೆ ಸಂಚರಿಸುತ್ತಿದ್ದವು. ಕೋವಿಡ್ ಬಳಿಕ 2021ರಲ್ಲಿ ಇತರೆ ರೂಟ್ಗಳಲ್ಲಿ ಸಿಟಿಬಸ್ ಓಡುತ್ತಿದ್ದರೂ, ಇದುವರೆಗೆ ಈ ರೂಟ್ನಲ್ಲಿ ಯಾವೊಂದು ಬಸ್ ಸಂಚರಿಸಿಲ್ಲ. ಬಸ್ ರೂಮ್ನ ಪರವಾನಿಗೆದಾರರು ಈ ರೀತಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ನ್ಯಾಯವೇ ಎಂದು ಸಾರ್ವಜನಿಕರು ಪ್ರಶ್ನಿಸಿ, 790 ಮಂದಿ ಸಹಿ ಹಾಕಿರುವ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ.
ಸಿಟಿ ಬಸ್ ವ್ಯವಸ್ಥೆ ಇಲ್ಲದೆ ಕೆಲ ಮಧ್ಯಮವರ್ಗ, ಹಿರಿಯರು, ಬಡವರು, ವಿದ್ಯಾರ್ಥಿಗಳು ಬೇರೆ ಕಡೆಗೆ ಬಸ್ಗಳನ್ನು ರಿಕ್ಷಾದಲ್ಲಿ ಹಿಡಿಯಲು ದುಬಾರಿ ವೆಚ್ಚವನ್ನು ಭರಿಸಲಾಗದೆ ಕಂಗಾಲಾಗಿದ್ದು, ಈಗಾಗಲೇ ಬಸ್ ರೂಟ್ ಪರವಾನಿಗೆ ಪಡೆದ 5 ಬಸ್ಗಳನ್ನು ಸಂಚರಿಸುವಂತೆ ಸೂಕ್ತ ತುರ್ತು ಕ್ರಮ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಖಾಸಗಿ ಬಸ್ ನ ಪೈಕಿ ಎರಡು ಬಸ್ ನ ಪರವಾನಿಗೆಯನ್ನು ರದ್ದುಪಡಿಸಿ 2 ಎಸ್.ಆರ್.ಟಿ.ಸಿ. ಬಸ್ಗಳನ್ನು ಸ್ಟೇಟ್ ಬ್ಯಾಂಕ್ ವರೆಗೆ ಓಡಿಸುವುದು. ಜಿಲ್ಲಾಡಳಿತ, ಸಾರಿಗೆ ಪ್ರಾಧಿಕಾರವು ಕಾಲಮಿತಿಯೊಳಗೆ ಬಸ್ಗಳನ್ನು ಸಂಚರಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. 10 ದಿನಗಳಲ್ಲಿ ಬಸ್ ಗಳು ಸಂಚರಿಸದಿದ್ದಲ್ಲಿ ಬಿಕರ್ನಕಟ್ಟೆ, ಕೈಕಂಬ, ಮರೋಳಿ, ಪಡೀಲ್ ಸುತ್ತಮುತ್ತಲಿನ ಸಾರ್ವಜನಿಕರು ಪಡೀಲ್ನಲ್ಲಿ ಅನಿವಾರ್ಯವಾಗಿ ಪ್ರತಿಭಟನೆಯನ್ನು ನಡೆಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.












