ಸನ್ಮಾರ್ಗ ವಾರ್ತೆ
ಮುಂಬೈ: ಶಿವಸೇನಾ ನಾಯಕನ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆಯವರ ಪುತ್ರ, ಮಹಾರಾಷ್ಟ್ರ ಬಿಜೆಪಿ ಶಾಸಕ ನಿತೇಶ್ ರಾಣೆಯನ್ನು ಪೊಲೀಸರು ಬಂಧಿಸಿದ್ದಾರೆ. ನಿತೇಶ್ ರಾಣೆ ಬಾಂಬೆ ಹೈಕೋರ್ಟ್ನಿಂದ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದು, ಸಿಂಧುದುರ್ಗ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘರತ್ ಹೇಳಿದ್ದರು. ನಂತರ ಪ್ರಾಸಿಕ್ಯೂಷನ್ ರಾಣೆಯನ್ನು ಪೊಲೀಸ್ ಕಸ್ಟಡಿಗೆ ವಹಿಸಿತ್ತು.
ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ(ಸಿಂಧುದುರ್ಗ) ಆರ್.ಬಿ.ರೋಟ್, ನಿತೇಶ್ ರಾಣೆಯ ಜಾಮೀನು ಅರ್ಜಿಯನ್ನು ಅಕಾಲಿಕ ಮತ್ತು ನಿರ್ವಹಣೆಗೆ ಸಾಧ್ಯವಿಲ್ಲದ್ದು ಎಂದು ತೀರ್ಪು ನೀಡಿ ಮಂಗಳವಾರ ತಿರಸ್ಕರಿಸಿದ್ದರು. ಪೊಲೀಸರ ಮನವಿಯ ಮೇರೆಗೆ ನ್ಯಾಯಾಲಯವು ಶುಕ್ರವಾರದವರೆಗೆ ರಾಣೆಯನ್ನು ಪೊಲೀಸ್ ಕಸ್ಟಡಿಗೊಪ್ಪಿಸಿದೆ. ಜಿಲ್ಲಾ ಸಹಕಾರಿ ಬ್ಯಾಂಕ್ ಚುನಾವಣಾ ಪ್ರಚಾರದ ವೇಳೆ ಶಿವಸೇನೆ ನಾಯಕ ಸಂತೋಷ್ ಪರಬ್ರನ್ನು ಕೊಲೆ ಮಾಡಲು ನಿತೇಶ್ ಯತ್ನಿಸಿದಾನೆಂದು ಪ್ರಕರಣ ದಾಖಲಾಗಿತ್ತು.
ಶಿವಸೇನಾ ಸಚಿವ ಆದಿತ್ಯ ಠಾಕ್ರೆಯವರನ್ನು ‘ಮಿಯಾಂವ್ ಮಿಯಾಂವ್’ ಎಂಬ ಧ್ವನಿಯಲ್ಲಿ ತಮಾಷೆ ಮಾಡಿದ ಪ್ರಕರಣದಲ್ಲಿಯೂ ಈತ ಆರೋಪಿಯಾಗಿದ್ದಾನೆ.












