ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಭಾಗಿಯಾದವರನ್ನು ಗುರುತಿಸಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿರುವ ಉತ್ತರ ಪ್ರದೇಶದ ಯೋಗಿ ಸರಕಾರದ ಕ್ರಮವನ್ನು ಕೂಡಲೇ ಹಿಂಪಡೆಯಬೇಕೆಂದು ಸುಪ್ರೀಂ ಕೋರ್ಟ್ ನಿನ್ನೆ ಆದೇಶಿಸಿದೆ.
ಉತ್ತರಪ್ರದೇಶ ಸರಕಾರವು ಸಿಐಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ತೆಗೆದುಕೊಂಡಿರುವ ಕ್ರಮಗಳನ್ನು ಹಿಂಪಡೆಯಬೇಕು. ಆರೋಪಿಯ ಸೊತ್ತುಗಳನ್ನು ಮುಟ್ಟುಗೋಲು ಹಾಕುವ ಮೂಲಕ ಸರಕಾರ ತೀರ್ಪುಗಾರನಂತೆ ವರ್ತಿಸುತ್ತಿದೆ ಎಂದು ಸುಪ್ರೀಂ ಕೋರ್ಟು ತರಾಟೆಗೆತ್ತಿಕೊಂಡಿದೆ.
ಜಸ್ಟಿಸ್ ಡಿವೈ ಚಂದ್ರ ಚೂಡ್, ಸೂರ್ಯಕಾಂತ್ ರವರಿದ್ದ ಪೀಠವು ಈ ಹೇಳಿಕೆ ನೀಡಿದ್ದು, ಮುಟ್ಟುಗೋಲಿಗೆ ಮುಂಚಿತವಾಗಿ ನೀಡಿರುವ ನೋಟೀಸು ರದ್ದು ಪಡಿಸಬೇಕೆಂದು ಮುನ್ನೆಚ್ಚರಿಕೆ ನೀಡಿತು. ರಾಜ್ಯ ಸರಕಾರದ ಕ್ರಮ ಕಾನೂನಿನ ವಿರುದ್ಧವಾಗಿದೆ ಎಂದು ಡಿವೈ ಚಂದ್ರಚೂಡ್ ತಿಳಿಸಿದರು.
ಸಿಎಎ ಪ್ರತಿಭಟನೆಗೆ ಸಂಬಂಧಿಸಿ ಯೋಗಿ ಸರಕಾರವು ಈಗಾಗಲೇ 274 ನೋಟೀಸು ಜಾರಿ ಮಾಡಿದ್ದೂ, 236 ನೋಟೀಸುಗಳಲ್ಲಿ ಆಸ್ತಿ ಮುಟ್ಟುಗೋಲು ಆರಂಭಿಸಲಾಗಿದೆ ಎಂದು ಸರಕಾರ ತಿಳಿಸಿತು. ಆದರೆ ಇದರಲ್ಲಿ ಸರಕಾರ ನಿಯಮ ಪಾಲಿಸಿಲ್ಲ ಎಂದು ಯೋಗಿ ಸರಕಾರದ ಪರವಾಗಿ ಹಾಜರಾದ ಅಡಿಶನಲ್ ಅಡ್ವೊಕೇಟ್ ಜನರಲ್ ಗರಿಮಾಪ್ರಸಾದ್ ರಿಗೆ ಸುಪ್ರೀಂ ಕೋರ್ಟ್ ಹೇಳಿತು.
ಆದೇಶ ವಾಪಸಾತಿಗೆ ನಾವು ನಿಮಗೆ ಕೊನೆಯ ಅವಕಾಶ ನೀಡುತ್ತಿದ್ದೇವೆ. ಫೆಬ್ರವರಿ 18ರೊಳಗೆ ನೀವು ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ಆದೇಶ ರದ್ದುಮಾಡಲಾಗುವುದು ಎಂದು ಕೋರ್ಟು ಯೋಗಿ ಸರಕಾರದ ನಡೆಯ ವಿರುದ್ದ ಎಚ್ಚರಿಕೆ ನೀಡಿತು.
ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಾಶಪಡಿಸಿದ್ದು, ಇದರ ನಷ್ಟ ಭರಿಸುವುದಕ್ಕಾಗಿ ಪ್ರತಿಭಟನೆಯ ಸಂದರ್ಭದಲ್ಲಿ ಭಾಗಿಯಾದವರನ್ನು ಗುರುತಿಸಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕುವಂತೆ ಯೋಗಿ ಸರಕಾರವು ನೋಟೀಸು ಜಾರಿ ಮಾಡಿತ್ತು.












