ಸನ್ಮಾರ್ಗ ವಾರ್ತೆ
ಸೌದಿ ಅರೇಬಿಯಾದ ಪ್ರಮುಖ ನಿರ್ಮಾಣ ಕಂಪನಿ ರಿಯಾದ್ ವಿಲ್ಲ ಮತ್ತು ಅದರ ಅಧ್ಯಕ್ಷರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದವರ ವಿರುದ್ಧ ಕೇರಳದ ಕಣ್ಣೂರು ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 10 ಕೋಟಿ ರೂಪಾಯಿ ಪರಿಹಾರ ಕೋರಿ ಕಂಪನಿ ಸಲ್ಲಿಸಿದ ಮಾನ ನಷ್ಟ ಮೊಕದ್ದಮೆ ಮೇಲೆ ಕಣ್ಣೂರು ಸಬ್ಕೋರ್ಟ್ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮೃತ ಉದ್ಯೋಗಿ ಕೆಪಿ ನವೀನ್ ಅವರ ಸಹೋದರಿ ರೇಖಾ ಅಜಯ್ ಮತ್ತು ಆನ್ಲೈನ್ ಪತ್ರಕರ್ತ ಯದು ಡಿ ನಾರಾಯಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನವೆಂಬರ್ 15 2012 ರಂದು ಅಲ್ ಹಸಾದಲ್ಲಿ ನಡೆದ ಕಾರು ಅಪಘಾತದಲ್ಲಿ ನವೀನ್ ಕುನ್ನಿರಿಕನ್ ಸಾವನ್ನಪ್ಪಿದ ಘಟನೆಯನ್ನು ತಿರುಚಲು ಮತ್ತು ಸಂಸ್ಥೆಗೆ ಕಳಂಕ ತರಲು ಯೂಟ್ಯೂಬ್ ಚಾನೆಲ್ ಮೂಲಕ ಉದ್ದೇಶಪೂರ್ವಕ ಪ್ರಯತ್ನ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಆಸ್ಪತ್ರೆಯ ಮರಣ ಪ್ರಮಾಣ ಪತ್ರವು ಸಾವಿಗೆ ಹೃದಯಘಾತ ಕಾರಣ ಎಂದು ಹೇಳುತ್ತದೆ. ಸೌದಿ ಪೊಲೀಸರು ಮತ್ತು ವಿಧಿ ವಿಜ್ಞಾನ ಇಲಾಖೆಯ ತನಿಖೆ ಕೂಡ ಸಾವಿನ ಸುತ್ತ ಯಾವುದೇ ಅನುಮಾನಸ್ಪದ ಸಂದರ್ಭಗಳು ಇಲ್ಲ ಎಂದು ತೋರಿಸುತ್ತದೆ.
ಮೃತ ದೇಹವನ್ನು ಭಾರತಕ್ಕೆ ತರಲು ಮತ್ತು ಪ್ರಯೋಜನಗಳನ್ನು ಒದಗಿಸಲು ಕಂಪನಿಯು ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡಿತ್ತು. ಕಂಪನಿಯು ಒಂದು ಲಕ್ಷ ರಿಯಲ್ ಗಳ ವಿಮಾ ಮೊತ್ತವನ್ನು ಭಾರತೀಯ ರಾಯಭಾರ ಕಚೇರಿಗೆ ಹಸ್ತಾಂತರಿಸಿತ್ತು. ಆದರೆ ಮತ್ತೊಬ್ಬ ಮಹಿಳೆ ಪರಿಹಾರವನ್ನು ಪಡೆದ ನಂತರ ರಾಯಭಾರ ಕಚೇರಿ ಮತ್ತು ಕಂದಾಯ ಇಲಾಖೆಯಿಂದ ಪರಿಶೀಲನೆ ನಡೆದಿತ್ತು.
ತನಿಖೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಮೊತ್ತವನ್ನು ಹಸ್ತಾಂತರಿಸಲು ವಿಳಂಬವಾಗಿದೆ ಎಂದು ಕಂಪನಿ ಹೇಳಿದೆ. ಕುಟುಂಬದ ಸಹಕಾರದ ಕೊರತೆಯ ಹೊರತಾಗಿಯೂ ಕಂಪನಿಯು ಮೊತ್ತವನ್ನು ನೀಡಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದೆ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.












