ಸನ್ಮಾರ್ಗ ವಾರ್ತೆ
ಮಂಗಳೂರು: ಮಂಗಳೂರು ವಕೀಲರ ಸಂಘ(ರಿ.) ವತಿಯಿಂದ ನವೆಂಬರ್ 26ರ ಗುರುವಾರ ನಗರದ ಕೊಡಿಯಾಲ್ಬೈಲ್ನ ಸಂತ ಅಲೋಶಿಯಸ್ ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ ಕಾನೂನು ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾನು ಕೆ. ಎಸ್. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಶ್ರೀಧರ್ ಪ್ರಭು ಅವರು ಮಾತನಾಡಿ, ಮಂಗಳೂರು ವಕೀಲರ ಸಂಘದ ಹಿರಿಯ ಸದಸ್ಯರ ಸಾಧನೆಗಳು, ಅವರ ಮಾರ್ಗದರ್ಶನ ಹಾಗೂ ಸಂವಿಧಾನ ಮತ್ತು ಕಾನೂನು ವ್ಯವಸ್ಥೆಗೆ ಅವರು ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದರು. ದೇಶದ ನ್ಯಾಯಾಂಗ ವ್ಯವಸ್ಥೆಯ ಬೆಳವಣಿಗೆಯಲ್ಲಿ ವಕೀಲರ ಪಾತ್ರ ಹಾಗೂ ಮಂಗಳೂರು ವಕೀಲರ ಸಂಘದ ಐತಿಹಾಸಿಕ ಮಹತ್ವ ಮತ್ತು ವೈಶಿಷ್ಟ್ಯಗಳನ್ನು ವಿವರಿಸಿದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಜಗದೀಶ್ ಕೆ. ಶೇನವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ನ್ಯಾಯವಾದಿ ಹಾಗೂ ನೋಟರಿ ಅಬ್ದುಲ್ ಅಝೀಜ್ ಮತ್ತು ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ವಿಜೇತ ಮಾಸ್ಟರ್ ಅಶ್ಮಿತ್ ಎ. ಜೆ. ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಮತ್ತೊಂದು ವಿಶೇಷ ಆಕರ್ಷಣೆಯಾಗಿ ವಕೀಲರು ಹಾಗೂ ವಕೀಲರ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸಿದ ಮಕ್ಕಳು ಹಾಗೂ ವಕೀಲರು ಸಭಿಕರ ಮೆಚ್ಚುಗೆಗೆ ಪಾತ್ರರಾದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಗಣೇಶ್ ಗಟ್ಟಿ ಅವರು ನಿರೂಪಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಆದ್ಯಪಾಡಿ, ಪ್ರಧಾನ ಕಾರ್ಯದರ್ಶಿ ಗೌತಮ್ ಬಿ. ಪಿ., ಜೊತೆ ಕಾರ್ಯದರ್ಶಿ ರವಿಕುಮಾರ್ ವಿ. ಹಾಗೂ ಖಜಾಂಚಿ ರೇಖಾ ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಆದ್ಯಪಾಡಿ ಸ್ವಾಗತಿಸಿದರು. ಸನ್ಮಾನಿತರ ಪರಿಚಯ ಹಾಗೂ ಸಾಧನೆಗಳ ವಿವರವನ್ನು ನ್ಯಾಯವಾದಿ ಆಶಾ ನಾಯಕ್ ಮತ್ತು ನ್ಯಾಯವಾದಿ ರಾಘವೇಂದ್ರ ಹಾಗೂ ಶ್ರೀಮತಿ ರೇಖಾ ಅವರು ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಗೌತಮ್ ಬಿ. ಪಿ. ವಂದಿಸಿದರು. ಎಂ. ಪಿ. ಸ್ವಾತಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರು, ಹಿರಿಯ ಹಾಗೂ ಕಿರಿಯ ನ್ಯಾಯವಾದಿಗಳು, ವಕೀಲರ ಸಂಘದ ಸದಸ್ಯರು ಹಾಗೂ ಅವರ ಕುಟುಂಬದವರು ಉಪಸ್ಥಿತರಿದ್ದರು.
ಸಂವಿಧಾನದ ಆಶಯಗಳು, ಕಾನೂನಿನ ಮಹತ್ವ, ನ್ಯಾಯಾಂಗದ ಘನತೆ ಹಾಗೂ ನ್ಯಾಯದ ಮೌಲ್ಯಗಳನ್ನು ಸ್ಮರಿಸುವುದರ ಜೊತೆಗೆ ಹಿರಿಯ ಸಾಧಕರನ್ನು ಗೌರವಿಸಿ, ವಕೀಲರ ಮತ್ತು ಅವರ ಮಕ್ಕಳ ಸಾಂಸ್ಕೃತಿಕ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ ಈ ಕಾರ್ಯಕ್ರಮವು ಎಲ್ಲರ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ನೆರವೇರಿತು.












