ಸಮುದ್ರದ ಗಡಿ ದಾಟಿ ಶ್ರೀಲಂಕಾಕ್ಕೆ ಕಾಲಿಟ್ಟ 12 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ಸೇನೆ

0
495

ಸನ್ಮಾರ್ಗ ವಾರ್ತೆ

ರಾಮೇಶ್ವರಂ: ಮೀನು ಹಿಡಿಯಲು ತೆರಳಿ ಅಂತಾರಾಷ್ಟ್ರೀಯ ಸಮುದ್ರದ ಗಡಿಯನ್ನು ದಾಟಿದ ಆರೋಪದ ಮೇಲೆ  ೧೨ ಮಂದಿ ಭಾರತೀಯ ಬಡ ಮೀನುಗಾರರನ್ನು ನೆರೆಯ ರಾಷ್ಟ್ರ ಶ್ರೀಲಂಕಾದ ನೌಕಾಪಡೆ ಬಂಧಿಸಿರುವ ಬಗ್ಗೆ ವರದಿಯಾಗಿದ್ದು, ಮೀನುಗಾರರ ಬುಡುಗಡೆಗೆ ಸಂಬಂಧಿಸಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು ಪತ್ರ ಬರೆದಿದ್ದಾರೆ.

ಅಂತಾರಾಷ್ಟ್ರೀಯ ಕಡಲ ಗಡಿ ರೇಖೆಯನ್ನು (ಐಎಂಬಿಎಲ್) ದಾಟಿದ ಆರೋಪದ ಮೇಲೆ ಶನಿವಾರ ತಡರಾತ್ರಿ ಕಚ್ಚತೀವು ಬಳಿ ಎರಡು ಟ್ರಾಲರ್‌ಗಳಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ರಾಮೇಶ್ವರಂ ಮೂಲದ 12 ಮಂದಿಯನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು. ನಂತರ ಶ್ರೀಲಂಕಾದ ಕಿಲಿನೊಚ್ಚಿ ನ್ಯಾಯಾಲಯವು ಮೀನುಗಾರರನ್ನು ಫೆ.  25 ರವರೆಗೆ ಕಸ್ಟಡಿಗೆ ಒಪ್ಪಿಸಿ, ಆದೇಶಿಸಿದೆ.

ಫೆ. 12ಕ್ಕೆ ಮಧ್ಯರಾತ್ರಿ ಯಾಂತ್ರೀಕೃತ ದೋಣಿಯಲ್ಲಿ ಮೂವರು ಮತ್ತು ಇನ್ನೊಂದು ದೋಣಿಯಲ್ಲಿದ್ದ ಒಂಬತ್ತು ಮಂದಿ ಕಚ್ಚತೀವು ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಲಂಕಾ ನೌಕಾಪಡೆಯ ಗಸ್ತುವಿನಲ್ಲಿದ್ದ ಅಧಿಕಾರಿಗಳು ಎರಡು ದೋಣಿಯ ಸಹಿತ  ಅವರನ್ನು ಬಂಧಿಸಿತು ಎಂದು ಮೂಲಗಳು ತಿಳಿಸಿವೆ.

ತಮಿಳ್ನಾಡನ್ನು ಶ್ರೀಲಂಕಾದಿಂದ ಪ್ರತ್ಯೇಕಿಸುವ ಪಾಕ್ ಕೊಲ್ಲಿ ಎರಡು ದೇಶದವರಿಗೆ ಬಹಳ ಪ್ರೀತಿಯ ಮೀನು ಹಿಡಿಯುವ ಪ್ರದೇಶವಾಗಿ ಗುರುತಿಸಿಕೊಂಡಿದೆ. ಈ ತಿಂಗಳು ಲಂಕಾ ಸೇನೆಯು ಭಾರತದ ಮೀನುಗಾರರನ್ನು ಬಂಧಿಸುತ್ತಿರುವುದು ಮೂರನೆೇ ಬಾರಿಯಾಗಿದೆ.

ಕೇವಲ ಒಂದು ವಾರದ ಹಿಂದೆ, ಮೂರು ಯಾಂತ್ರೀಕೃತ ದೋಣಿಗಳಲ್ಲಿದ್ದ 11 ಮಂದಿ ರಾಮೇಶ್ವರಂನ ಮೀನುಗಾರರನ್ನು ಲಂಕಾ ನೌಕಾಪಡೆ ಬಂಧಿಸಿತ್ತು. ಏತನ್ಮಧ್ಯೆ, ಜ. 25 ರಂದು ಜಾಫ್ನಾ ನ್ಯಾಯಾಲಯದಿಂದ ಬಿಡುಗಡೆಯಾಗಿದ್ದ 43 ಮೀನುಗಾರರ ಪೈಕಿ 37 ಜನರು ಇನ್ನೂ ಭಾರತಕ್ಕೆ ಮರಳಿಲ್ಲ. ಬಂಧನಕ್ಕೊಳಗಾದ ಮೀನುಗಾರರನ್ನು ಬಿಟ್ಟುಬಿಡಿ ಎಂದು ತಮಿಳ್ನಾಡು ಸರಕಾರ ವಿವಿಧ ರಾಜಕೀಯ ಪಾರ್ಟಿಗಳು ಆಗ್ರಹಿಸಿವೆ.

ಮೀನುಗಾರರ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ ಎಂದು ‘ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿದೆ.

ಲಂಕಾ ನೌಕಾಪಡೆಯು ಮೀನುಗಾರರನ್ನು ಆಗಾಗ್ಗೆ ಬಂಧಿಸುವ ಮೂಲಕ ಕಿರುಕುಳ ನೀಡುತ್ತಿದೆ. ಇದು ಮೀನುಗಾರ ಸಮುದಾಯದಲ್ಲಿ ಅಭದ್ರತೆಯ ಭಾವನೆ ಮತ್ತು ತೀವ್ರ ನೋವನ್ನುಂಟು ಮಾಡಿದೆ. ಕೇವಲ ಎರಡು ವಾರಗಳಲ್ಲಿ ಇದು ಮೂರನೇ ಇಂತಹ ಘಟನೆಯಾಗಿದೆ. 41 ಮೀನುಗಾರರು ಮತ್ತು ಆರು ಮೀನುಗಾರಿಕಾ ದೋಣಿಗಳು ಶ್ರೀಲಂಕಾ ನೌಕಾಪಡೆಯ ವಶದಲ್ಲಿವೆ. ಕೇಂದ್ರ ಸರಕಾರ ಶೀಘ್ರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಶ್ರೀಲಂಕಾ ಸರಕಾರದ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಕ್ರಮ ಕೈಗೊಳ್ಳಬೇಕು, ಜೊತೆಗೆ ಎರಡೂ ದೇಶಗಳ ಮೀನುಗಾರ ಸಮುದಾಯದ ಮುಖಂಡರ ನಡುವೆ ಮಾತುಕತೆಯನ್ನು ನಡೆಸಿದಲ್ಲಿ ಉದ್ವಿಗ್ನ ವಾತಾವರಣವನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು ಎಂದು ತಮಿಳುನಾಡು ಮುಖ್ಯಮಂತ್ರಿ ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.