ಸಾಯಿ ನಿಕೇಶ್ ರವಿಚಂದ್ರನ್ ಯಾಕೆ ಇನ್ನೂ ಜಿಹಾದಿ ಆಗಿಲ್ಲ?

0
424

ಸನ್ಮಾರ್ಗ ಸಂಪಾದಕೀಯ

ಸಾಯಿ ನಿಕೇಶ್ ರವಿಚಂದ್ರನ್ ಎಂಬ 21 ವರ್ಷದ ಯುವಕ ಮಾಧ್ಯಮಗಳ ನಯವಂಚಕ ನೀತಿಯನ್ನು ಬಯಲಿಗೆಳೆದಿದ್ದಾನೆ. ಈತ ತಮಿಳುನಾಡಿನ ಕೊಯಂಬತ್ತೂರಿನವ. 2018ರಲ್ಲಿ ಈತ ಉಕ್ರೇನ್‌ಗೆ ತೆರಳಿದ್ದ. ಉಕ್ರೇನಿನ ಖಾರ್ಕಿವ್ ರಾಷ್ಟ್ರೀಯ ಏರೋಸ್ಪೇಸ್ ವಿಶ್ವವಿದ್ಯಾಲಯದಲ್ಲಿ ಏರೋನಾಟಿಕ್ಸ್ನಲ್ಲಿ ಶಿಕ್ಷಣ ಪಡೆಯುವುದು ಆತನ ಉದ್ದೇಶ. ಈ ವರ್ಷ ಆತ ಶಿಕ್ಷಣ ಪೂರ್ತಿಗೊಳಿಸಿ ಭಾರತಕ್ಕೆ ಮರಳಬೇಕಿತ್ತು. ಆದರೆ, ಉಕ್ರೇನ್ ಮೇಲೆ ರಶ್ಯಾ ದಾಳಿ ನಡೆಸುವುದರೊಂದಿಗೆ ಆತ ತನ್ನ ನಿಲುವನ್ನು ಬದಲಿಸಿದ. ಇತರೆಲ್ಲ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ಬಿಟ್ಟು ಭಾರತಕ್ಕೆ ಬರುತ್ತಿರುವಾಗ ಆತ ಮಾತ್ರ ಉಕ್ರೇನ್ ಸೇನೆ ಸೇರಿಕೊಂಡ ಮತ್ತು ರಶ್ಯಾ ವಿರುದ್ಧ ಹೋರಾಟದಲ್ಲಿ ಭಾಗಿಯಾದ… ಇದಿಷ್ಟು ಸುದ್ದಿ. ಮತ್ತು ಈ ಸುದ್ದಿ ಬಹುತೇಕ ಎಲ್ಲ ಮಾಧ್ಯಮಗಳಲ್ಲೂ ಪ್ರಕಟ-ಪ್ರಸಾರವಾಗಿವೆ. ಹಾಗಂತ,

ಇದೊಂದು ಸುದ್ದಿ ಮಾತ್ರವೇ ಅಥವಾ ಸುದ್ದಿಯಾಚೆಗೂ ಮೀರಿ ಜಿಜ್ಞಾಸೆ-ಚರ್ಚೆಗೆ ಒಳಗಾಗಬೇಕಿದ್ದ ವಿಷಯವೇ? ಒಂದುವೇಳೆ, ಇದೇ ರೀತಿಯ ಬೆಳವಣಿಗೆ ಸಿರಿಯಾ, ಇರಾಕ್ ಅಥವಾ ಯಮನ್‌ನಲ್ಲಿ ನಡೆದಿರುತ್ತಿದ್ದರೆ ಮಾಧ್ಯಮಗಳು ಇದೇರೀತಿ ಬರೇ ಇದನ್ನು ಸುದ್ದಿಯ ನ್ನಷ್ಟೇ ಮಾಡಿರುತ್ತಿತ್ತೇ? ಭಾರತದ ಮುಸ್ಲಿಮ್ ಯುವಕನೋರ್ವ ಸಿರಿಯಾ ಸರ್ಕಾರದ ವಿರುದ್ಧ ಅಥವಾ ಇರಾಕ್ ಮೇಲೆ ದಾಳಿ ಮಾಡಿರುವ ಅಮೇರಿಕನ್ ಸೇನೆಯ ವಿರುದ್ಧ ಅಥವಾ ಅಫಘಾನ್ ಅತಿಕ್ರಮಣ ಇಲ್ಲವೇ ಫೆಲೆಸ್ತೀನ್ ಅತಿಕ್ರಮಣ ನಡೆಸಿರುವ ಇಸ್ರೇಲ್ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿರುತ್ತಿದ್ದರೆ ಅದನ್ನು ಭಾರತೀಯ ಮಾಧ್ಯಮಗಳು ಹೇಗೆ ನೋಡಿರುತ್ತಿತ್ತು? ಆತನನ್ನು ಜಿಹಾದಿ ಅನ್ನುತ್ತಿರಲಿಲ್ಲವೇ? ಆತನ ಕುಟುಂಬವನ್ನು ಬೆಂಬತ್ತುತ್ತಿರಲಿಲ್ಲವೇ? ಆ ಕುಟುಂಬಕ್ಕೆ ಎಲ್ಲೆಲ್ಲಿಂದ ಹಣ ಹರಿದು ಬರುತ್ತಿದೆ ಎಂಬುದರ ತಪಾಸಣೆ ನಡೆಸುತ್ತಿರಲಿಲ್ಲವೇ? ಆತನ ಮನೆಯಲ್ಲಿ ಕುರ್‌ಆನ್ ಓದುತ್ತಾರಾ, ಇಸ್ಲಾಮೀ ಸಾಹಿತ್ಯ ಕೃತಿಗಳಿವೆಯೇ ಎಂಬಲ್ಲಿಂದ ಹಿಡಿದು ಮನೆಯವರು ನಮಾಝ್ ಮಾಡುತ್ತಾರಾ, ಮಹಿಳೆಯರು ಬುರ್ಖಾ-ಹಿಜಾಬ್ ಧರಿಸುತ್ತಾರಾ, ಅವರು ಟ್ವಿಟರ್, ಫೇಸ್‌ಬುಕ್ ಬಳಸುತ್ತಾರಾ, ಈ ಹಿಂದೆ ಯಾವೆಲ್ಲ ವಿಷಯಗಳ ಮೇಲೆ ಅವರು ಪೋಸ್ಟ್ ಮಾಡಿದ್ದಾರೆ, ಯಾರನ್ನು ಫಾಲೋ ಮಾಡುತ್ತಿದ್ದಾರೆ, ಯಾವೆಲ್ಲ ವೆಬ್‌ಸೈಟ್ ಮತ್ತು ಯೂಟ್ಯೂಬ್‌ಗಳಿಗೆ ಭೇಟಿ ಕೊಟ್ಟಿದ್ದಾರೆ, ವಿದೇಶಕ್ಕೆ ಹೋಗಿದ್ದರಾ, ಪಾಸ್‌ಪೋರ್ಟ್ ಇದೆಯಾ, ಯಾವ ಕಾಲೇಜಿನಲ್ಲಿ ಕಲಿತಿದ್ದಾರೆ… ಎಂಬಿತ್ಯಾದಿಗಳ ವರೆಗೆ ಇಂಚಿಂಚಾಗಿ ಪತ್ತೆ ಕಾರ್ಯ ನಡೆಸುತ್ತಿರಲಿಲ್ಲವೇ? ಅಂದಹಾಗೆ, ಇಂಥ ಪ್ರಶ್ನೆಗೆ ಕಾರಣ ಇದೆ.

ಇತ್ತೀಚೆಗೆ ನಡೆದ ಹಿಜಾಬ್ ಪ್ರಕರಣವನ್ನೇ ಗಮನಿಸಿ. ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳುವ ಹಕ್ಕಿಗಾಗಿ ಪ್ರತಿಭಟನೆ ಹಮ್ಮಿಕೊಂಡರು. ಕನ್ನಡ ಟಿ.ವಿ. ಚಾನೆಲ್‌ಗಳು ಈ ಪ್ರಕರಣವನ್ನು ಬಿಂಬಿಸಿದ ರೀತಿ ಹೇಗಿತ್ತು? ರಹಸ್ಯ ಕ್ಯಾಮರಾದ ಜೊತೆ ಪತ್ರಕರ್ತರು ಈ ವಿದ್ಯಾರ್ಥಿನಿಯರ ಮನೆ ಪ್ರವೇಶಿಸಿದ್ದು ಮತ್ತು ಅವರ ಅಜ್ಜಿ-ಅಣ್ಣ ಮುಂತಾದವರ ಮಾತುಗಳನ್ನು ರಹಸ್ಯವಾಗಿ ಸೆರೆ ಹಿಡಿದಿರಲಿಲ್ಲವೇ? ವಿದೇಶಿ ಶಕ್ತಿಗಳು ಈ ಪ್ರತಿಭಟನೆಯಲ್ಲಿ ಕೈಜೋಡಿಸಿವೆ ಎಂಬ ಶೀರ್ಷಿಕೆ ಕೊಟ್ಟು ಆ ಕಾರ್ಯಕ್ರಮವನ್ನು ಅವು ಪ್ರಸಾರವನ್ನೂ ಮಾಡಿರಲಿಲ್ಲವೇ? ಆದ್ದರಿಂದಲೇ,

ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ವಿದ್ಯಾರ್ಥಿನಿಯರ ಪ್ರತಿಭಟನೆಯನ್ನು ಈ ಮಟ್ಟಕ್ಕೆ ಒಯ್ಯುವ ಸಾಮರ್ಥ್ಯವಿರುವ ಮಾಧ್ಯಮಗಳು ಸಾಯಿ ನಿಕೇಶ್ ರವಿಚಂದ್ರನ್ ವಿಷಯದಲ್ಲಿ ಮಾತ್ರ ತೀವ್ರ ಅಸಾಮರ್ಥ್ಯವನ್ನು ಪ್ರದರ್ಶಿಸಿದ್ದೇಕೆ? ಈತನ ಮನೆಯೇನೂ ದಟ್ಟಡವಿಯಲ್ಲಿ ಇಲ್ಲ. ತಮಿಳುನಾಡಿನ ಕೊಯಂಬತ್ತೂರ್ ತುಡಿಯಲೂರ್ ಸುಬ್ರಹ್ಮಣೀಯಪಾಳಯಂ ಪ್ರದೇಶದಲ್ಲಿ ಈತನ ಮನೆಯಿದೆ. ಈತ ಭಾರತೀಯ ಸೇನೆ ಸೇರುವ ಉದ್ದೇಶದಿಂದ ಅರ್ಜಿಯನ್ನೂ ಸಲ್ಲಿಸಿದ್ದನಂತೆ. ಆದರೆ ಅದು ಪುರಸ್ಕೃತವಾಗಿಲ್ಲ. ಒಂದುವೇಳೆ, ಈ ಯುವಕ ಮುಸ್ಲಿಮ್ ಆಗಿರುತ್ತಿದ್ದರೆ ಇಷ್ಟು ತಣ್ಣಗಿನ ವರದಿಗಳು ಪ್ರಕಟವಾಗಿರುತ್ತಿತ್ತೇ? ಈ ಮಾಹಿತಿಯನ್ನೇ ಆತನೊಳಗಿನ ಜಿಹಾದಿ ಗುಣಕ್ಕೆ ಪುರಾವೆಯಾಗಿ ಮಾಧ್ಯಮಗಳು ಬಿಂಬಿಸಲಾಗುತ್ತಿರಲಿಲ್ಲವೇ? ಭಾರತೀಯ ಸೇನೆ ಸೇರಿ ಜಿಹಾದಿ ಕೃತ್ಯವೆಸಗುವ ಉದ್ದೇಶ ಹೊಂದಿದ್ದ ಎಂಬ ರೀತಿಯಲ್ಲಿ ಸುದ್ದಿ ಪ್ರಸಾರ ನಡೆಯುತ್ತಿರಲಿಲ್ಲವೇ? ಆತನ ಕೋಣೆಯಲ್ಲಿ ಕಂಡುಬಂದಿರುವ ಯೋಧರ ಚಿತ್ರವನ್ನು ಎತ್ತಿಕೊಂಡು ಆತನೊಳಗೆ ಗುಪ್ತಗಾಮಿನಿಯಾಗಿ ಹೇಗೆ ಜಿಹಾದ್ ರಕ್ತ ಹರಿಯುತ್ತಿತ್ತು ಮತ್ತು ಈ ಯೋಧರ ಚಿತ್ರವನ್ನು ನೋಡಿಕೊಂಡು ಹೇಗೆ ಆತ ಜಿಹಾದ್‌ಗೆ ತಯಾರಿ ನಡೆಸುತ್ತಿದ್ದ ಎಂಬೆಲ್ಲ ರೋಚಕ ಕತೆಗಳುಳ್ಳ ಕಾರ್ಯಕ್ರಮಗಳನ್ನು ಅವು ಪ್ರಸಾರ ಮಾಡುತ್ತಿರಲಿಲ್ಲವೇ? ಅಷ್ಟಕ್ಕೂ,
ಮಾಧ್ಯಮಗಳು ಯಾಕಿಷ್ಟು ಬಹಿರಂಗ ಪಕ್ಷಪಾತಿತನ ಪ್ರದರ್ಶಿಸುತ್ತಿವೆ ಎಂಬ ಪ್ರಶ್ನೆ ಅಸಂಖ್ಯಾತ ಮಂದಿಯಲ್ಲಿದೆ. ಆ ನಿರೂಪಕ ಹಾಗೆ, ಈ ನಿರೂಪಕಿ ಹೀಗೆ, ಇಂತಿಂಥ ಚಾನೆಲ್‌ಗಳು ಹೀಗೀಗೆ ಎಂಬ ಹಣೆಪಟ್ಟಿ ಬಹುತೇಕ ಎಲ್ಲ ಮುಖ್ಯವಾಹಿನಿ ಟಿ.ವಿ. ಚಾನೆಲ್‌ಗಳಿಗೂ ಈಗಾಗಲೇ ವೀಕ್ಷಕರಿಂದ ಲಭ್ಯವಾಗಿದೆ. ಹಾಗಂತ, ಚಾನೆಲ್ ಮಾಲಕರಿಗೂ ಅದರಲ್ಲಿ ಕೆಲಸ ಮಾಡುವ ಪತ್ರಕರ್ತರಿಗೂ ತಾವು ಏಕಮುಖವಾಗಿ ಕಾರ್ಯಕ್ರಮ ಪ್ರಸಾರ ಮಾಡುತ್ತಿದ್ದೇವೆ ಎಂಬುದು ಖಂಡಿತ ಗೊತ್ತಿರುತ್ತದೆ. ಹಾಗಿದ್ದೂ, ಇವರೇಕೆ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾದುದು. ಇದಕ್ಕೆ ಉತ್ತರ, ಮೊನ್ನೆ ಮೊನ್ನೆ ಮುಗಿದ ಐದು ರಾಜ್ಯಗಳ ಚುನಾವಣೆಯ ಬಳಿಕ ಬಿಡುಗಡೆಯಾದ ಮಾಹಿತಿಗಳಲ್ಲಿದೆ.

ಭಾರತದ ಪ್ರಮುಖ ಮಾಧ್ಯಮ ಸಂಸ್ಥೆಯಾದ ನೆಟ್‌ವರ್ಕ್18ಗೆ ಬಿಜೆಪಿಯು 28.82 ಕೋಟಿ ರೂಪಾಯಿಯ ಜಾಹೀರಾತನ್ನು ನೀಡಿತ್ತು ಎಂಬುದು ಈ ಮಾಹಿತಿಗಳಲ್ಲಿ ಒಂದು. ಹಾಗೆಯೇ, ಝೀ ಮೀಡಿಯಾಕ್ಕೆ 23.48 ಕೋಟಿ, ಎಬಿಪಿ ನ್ಯೂಸ್ ಮೀಡಿಯಾಕ್ಕೆ 18.19 ಕೋಟಿ, ಇಂಡಿಯಾ ಟುಡೇಗೆ10.8 ಕೋಟಿ, ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ಗೆ 9.1 ಕೋಟಿ, ಐಟಿವಿ ನೆಟ್‌ವರ್ಕ್‌ಗೆ 7.24 ಕೋಟಿ ಮತ್ತು ಟೈಮ್ಸ್ ಗ್ರೂಪ್‌ಗೆ5.97 ಕೋಟಿ ರೂಪಾಯಿ ಮೊತ್ತದ ಜಾಹೀರಾತನ್ನು ನೀಡಿದೆ ಎಂದು ಹೇಳಲಾಗುತ್ತಿದೆ. ಕನ್ನಡದ ಪ್ರಮುಖ ಟಿ.ವಿ. ಚಾನೆಲ್‌ನ ಮುಖ್ಯ ನಿರೂಪಕರು ಬಿಜೆಪಿಯಿಂದ ಶೀಘ್ರವೇ ರಾಜ್ಯಸಭೆ ಪ್ರವೇಶಿಸುತ್ತಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಒಂದುರೀತಿಯಲ್ಲಿ,

ಮಾಧ್ಯಮಗಳ ಮುಸ್ಲಿಮ್ ದ್ವೇಷಿ ವರ್ತನೆಗಳು ಮತ್ತು ಬಿಜೆಪಿಯ ಚುನಾವಣಾ ಗೆಲುವು- ಇವೆರಡರ ನಡುವೆಯೂ ಗಾಢ ಸಂಬಂಧವಿದೆ. ಕೋಮು ಧ್ರುವೀಕರಣ ಬಿಜೆಪಿಯ ರಾಜಕೀಯ ತಂತ್ರ. ಹಿಂದೂ-ಮುಸ್ಲಿಮ್ ಎಂಬುದಾಗಿ ಸಮಾಜ ಎಲ್ಲಿಯವರೆಗೆ ವಿಭಜನೆಗೊಂಡಿರುತ್ತದೋ ಅಲ್ಲಿವರೆಗೆ ಬಿಜೆಪಿಯ ರಾಜಕೀಯ ಗೆಲುವು ಬಹು ಸುಲಭ. ಇದು ಸಾಧ್ಯವಾಗಬೇಕಾದರೆ ಮಾಧ್ಯಮಗಳ ಸಹಕಾರ ಬೇಕೇ ಬೇಕು. ಬಿಜೆಪಿಯ ರಾಜಕೀಯ ತಂತ್ರಕ್ಕೆ ಪೂರಕವಾಗಿ ನಿರಂತರ ಕತೆಗಳನ್ನು ಮಾಧ್ಯಮಗಳು ಸೃಷ್ಟಿ ಮಾಡುತ್ತಾ ಹೋದರೆ, ಬಿಜೆಪಿಯ ಗುರಿ ಈಡೇರುತ್ತಾ ಹೋಗುತ್ತದೆ. ಹೀಗೆ ಏಕಮುಖವಾಗಿ ಕತೆಗಳನ್ನು ಸೃಷ್ಟಿ ಮಾಡಬೇಕಾದರೆ ಬಿಜೆಪಿಯ ಕಡೆಯಿಂದ ಜಾಹೀರಾತಿನ ರೂಪದಲ್ಲಿ ಅಥವಾ ಇತರ ರೀತಿಯಲ್ಲೆಲ್ಲ ಮಾಧ್ಯಮಗಳಿಗೆ ಸಹಕಾರ ದೊರೆಯುತ್ತಲೇ ಇರಬೇಕು. ಬಿಜೆಪಿ ಸದ್ಯ ಈ ದೇಶದ ಅತಿ ಶ್ರೀಮಂತ ರಾಜಕೀಯ ಪಕ್ಷ. ಆದ್ದರಿಂದ ಅದು ಮಾಧ್ಯಮ ಸಂಸ್ಥೆಗಳಿಗೆ ಪ್ರಿಯವಾಗಿರುವುದರಲ್ಲಿ ಅಚ್ಚರಿ ಏನಿಲ್ಲ. ಯಾವುದೇ ಮಾಧ್ಯಮ ಸಂಸ್ಥೆಯೂ ನಿಜ ಪತ್ರಿಕಾ ಧರ್ಮವನ್ನು ಪಾಲಿಸುತ್ತಾ ಇಂದಿನ ದಿನಗಳಲ್ಲಿ ದೀರ್ಘ ಕಾಲ ಬದುಕಿ ಉಳಿಯುವುದು ಸುಲಭ ಅಲ್ಲ. ಅದೊಂದು ಸವಾಲು. ತನ್ನ ಸಿಬಂದಿಗಳಿಗೆ ತಿಂಗಳು ತಿಂಗಳು ವೇತನ ಪಾವತಿಸುತ್ತಾ ಮತ್ತು ನಿಜ ಪತ್ರಿಕಾ ವರದಿಯ ಕಾರಣಕ್ಕಾಗಿ ರಾಜಕೀಯ ಪಕ್ಷಗಳ ಮಾನನಷ್ಟ ಮೊಕದ್ದಮೆಯಂಥ ಕೇಸುಗಳಿಗೆ ಕೊರಳೊಡ್ಡುತ್ತಾ ಉಳಿಯಬೇಕಾದರೆ ಅಪಾರ ನೈತಿಕ ಮತ್ತು ಆರ್ಥಿಕ ಬಲ ಬೇಕೇ ಬೇಕು. ಅಲ್ಲದೇ, ತನ್ನ ಅಣತಿಯಂತೆ ನಡಕೊಳ್ಳದ ಮಾಧ್ಯಮ ಸಂಸ್ಥೆಗಳ ಮೇಲೆ ಪ್ರಭುತ್ವ ವಿವಿಧ ನೆಪಗಳನ್ನೊಡ್ಡಿ ದಾಳಿ ನಡೆಸುತ್ತಲೂ ಇರುತ್ತದೆ. ಸರಕಾರದ ಐಟಿ, ಇಡಿ ಸಂಸ್ಥೆಗಳು ಯಾವ ಸಮಯದಲ್ಲೂ ಇಂಥ ಸಂಸ್ಥೆಗಳನ್ನು ಸಿಲುಕಿಸುವ ಉದ್ದೇಶದಿಂದ ಸಂದರ್ಭಕ್ಕಾಗಿ ಕಾಯುತ್ತಲೂ ಇರುತ್ತದೆ. ಹೀಗೆ ಸವಾಲು ಮತ್ತು ಕಿರುಕುಳವನ್ನು ಎದುರಿಸುತ್ತಾ ದಿನ ದೂಡುವುದಕ್ಕಿಂತ ಪ್ರಭುತ್ವದ ಅಣತಿಯಂತೆ ಕೆಲಸ ಮಾಡುವುದರಿಂದ ಎರಡು ಲಾಭ ಇದೆ. ಒಂದು, ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಇನ್ನೊಂದು- ಕೋರ್ಟು-ಕಚೇರಿ ಎಂದು ಅಲೆದಾಡಬೇಕಾದ ಅಗತ್ಯವೂ ಉಂಟಾಗುವುದಿಲ್ಲ. ಆದ್ದರಿಂದ ಹೆಚ್ಚಿನ ಮಾಧ್ಯಮಗಳು ಸುಲಭದ ದಾರಿಯನ್ನೇ ನೆಚ್ಚಿಕೊಳ್ಳುತ್ತವೆ. ಯಾವಾಗಲಾದರೊಮ್ಮೆ ಪ್ರಭುತ್ವವನ್ನು ಪ್ರಶ್ನಿಸುವ ರೀತಿಯ ಕಾರ್ಯಕ್ರಮವನ್ನು ಪ್ರಸಾರ ಮಾಡಿ ಉಳಿದಂತೆ ಪ್ರಭುತ್ವಕ್ಕೆ ಪೂರಕವಾದ ಕತೆಗಳನ್ನೇ ಕಟ್ಟಿ ಜನರಿಗೆ ಮಂಕುಬೂದಿ ಎರಚುತ್ತಲೇ ಇರುತ್ತವೆ. ಆದ್ದರಿಂದಲೇ,

ಸಾಯಿ ನಿಕೇಶ್ ರವಿಚಂದ್ರನ್ ಇನ್ನೂ ಜಿಹಾದಿ ಮತ್ತು ಆತಂಕವಾದಿಯಾಗದೇ ಉಳಿದುಕೊಂಡಿದ್ದಾನೆ.