ಸನ್ಮಾರ್ಗ ಸಂಪಾದಕೀಯ
ಕಳೆದೊಂದು ವಾರದಲ್ಲಿ ರಾಜ್ಯದಲ್ಲಿ ಪ್ರಮುಖ ಮೂರು ಬೆಳವಣಿಗೆಗಳು ನಡೆದಿವೆ. ವಿಶೇಷ ಏನೆಂದರೆ, ಈ ಮೂರೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಮುಸ್ಲಿಮರನ್ನು ಕೇಂದ್ರೀಕರಿಸಿಯೇ ಇದೆ ಮತ್ತು ಹಿಂದೂ-ಮುಸ್ಲಿಮ್ ಎಂದು ಜನರನ್ನು ವಿಭಜಿಸುವುದಕ್ಕೆ ಅತ್ಯಂತ ಹೆಚ್ಚು ಕೊಡುಗೆಗಳನ್ನು ನೀಡುತ್ತದೆ. 1. ಮದರಸಾಗಳನ್ನು ಶಿಕ್ಷಣ ಪದ್ಧತಿಯೊಳಗೆ ತರುವುದು. 2. ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರ್ಪಡೆಗೊಳಿಸುವುದು ಮತ್ತು 3. ಕೋಲಾರ ಜಿಲ್ಲಾ ಕೇಂದ್ರ ಬಳಿ ಇದ್ದ ಕ್ಲಾಕ್ ಟವರ್ನಲ್ಲಿ ರಾಷ್ಟ್ರಧ್ವಜ ಹಾರಿಸುವುದು. ಅಂದಹಾಗೆ,
ಈ ಮೂರಕ್ಕೂ ಅಂತರ್ ಸಂಪರ್ಕವಿದೆ. ಈ ಮೂರರ ಸುತ್ತ ನಡೆಯುವ ಚರ್ಚೆ ಅಂತಿಮವಾಗಿ ಕೊನೆಗೊಳ್ಳುವುದು ಹಿಂದೂ- ಮುಸ್ಲಿಮ್ ಎಂಬ ಅತಿ ಸೂಕ್ಷಮ ಕೇಂದ್ರಬಿಂದುವಿನಲ್ಲಿ. ಕೋಲಾರದ ಕ್ಲಾಕ್ ಟವರ್ನಲ್ಲಿ ರಾಷ್ಟ್ರಧ್ವಜ ಹಾರಿಸದಿದ್ದರೆ ಬೆಂಬಲಿಗರೊಂದಿಗೆ ಸೇರಿ ಧರಣಿ ನಡೆಸುವುದಾಗಿ ಬೆದರಿಕೆ ಹಾಕಿದ ಬಿಜೆಪಿ ಸಂಸದ ಮುನಿಸ್ವಾಮಿ, ಹಿಜಾಬ್ ವಿವಾದದ ವೇಳೆ ಧ್ವಜಸ್ತಂಭದಲ್ಲಿ ವಿದ್ಯಾರ್ಥಿಗಳು ಕೇಸರಿ ಧ್ವಜ ಹಾರಿಸಿದ್ದರ ಬಗ್ಗೆ ಒಂದು ಮಾತನ್ನೂ ಆಡಿರಲಿಲ್ಲ. ಇದೇವೇಳೆ, ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದ ಸಚಿವ ಈಶ್ವರಪ್ಪರ ಬಗ್ಗೆ ಈವರೆಗೂ ಅವರು ಖಂಡಿಸಿ ಒಂದು ಗೆರೆಯ ಹೇಳಿಕೆಯನ್ನೂ ನೀಡಿಲ್ಲ. ಅವರದೇ ಮಾತೃ ಸಂಸ್ಥೆಯಲ್ಲಿ ಇತ್ತೀಚಿನವರೆಗೂ ರಾಷ್ಟ್ರಧ್ವಜಕ್ಕೆ ಮನ್ನಣೆ ಇಲ್ಲದಿದ್ದುದರ ಕುರಿತೂ ಅವರಲ್ಲಿ ಆಕ್ಷೇಪಗಳಿಲ್ಲ. ಮತ್ತೇಕೆ ಕೋಲಾರದ ಕ್ಲಾಕ್ ಟವರ್ ಅವರ ಕಣ್ಣಿಗೆ ಬಿತ್ತು ಅಂದರೆ, ಅದು ಮುಸ್ಲಿಮ್ ಬಾಹುಳ್ಯ ಪ್ರದೇಶದಲ್ಲಿದೆ ಮತ್ತು ಅಂಜುಮನ್ ಇಸ್ಲಾಮಿಯಾ ಸಂಘಟನೆಗೆ ಅಲ್ಲಿ ಹಿಡಿತವಿದೆ. ಹಾಗಂತ,
ಈ ಅಂಜುಮನ್ ಸಂಸ್ಥೆ ರಾಷ್ಟ್ರಧ್ವಜಕ್ಕೆ ವಿರೋಧವೇನೂ ಇಲ್ಲ. ಆದರೆ ಆ ಕ್ಲಾಕ್ ಟವರನ್ನು ತೋರಿಸಿ ಮತ್ತು ಅದಕ್ಕೆ ಬಳಿದಿರುವ ಬಣ್ಣವನ್ನು ಉಲ್ಲೇಖಿಸಿ ಮುಸ್ಲಿಮ್ ವಿರೋಧಿ ಭಾವವನ್ನು ಸಮಾಜದಲ್ಲಿ ಬಿತ್ತುವುದು ಅವರ ಉದ್ದೇಶ. ಆದರೆ, ಸ್ವಯಂ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಅಂಜುಮನ್ ಸಂಸ್ಥೆ ಸಂಸದರ ದುರುದ್ದೇಶವನ್ನು ವಿಫಲಗೊಳಿಸಿತ್ತು. ಆದರೂ ಒಂದೆರಡು ವಾರಗಳ ತನಕ ಕ್ಲಾಕ್ ಟವರ್ ಚರ್ಚೆಯಾಗುವಂತೆ ಮತ್ತು ಆ ಮೂಲಕ ಹಿಂದೂ-ಮುಸ್ಲಿಮ್ ವಿಭಜನೆಗೆ ಕೊಡುಗೆ ನೀಡಲು ಸಂಸದರು ಯಶಸ್ವಿಯಾದರು. ಇದರ ಜೊತೆಗೇ ಇನ್ನೆರಡು ಇಂಥದ್ದೇ ಸಂಗತಿಗಳನ್ನೂ ಸರ್ಕಾರ ಸಾರ್ವಜನಿಕವಾಗಿ ಹಂಚಿಕೊಂಡಿತು. ನಿಜವಾಗಿ,
ಶಾಲೆಗಳಲ್ಲಿ ಭಗವದ್ಗೀತೆಯನ್ನು ಕಲಿಸುವುದಾಗಲಿ, ಮದ್ರಸಾಗಳನ್ನು ಶಿಕ್ಷಣ ಪದ್ಧತಿಯೊಳಗೆ ತರುವುದಾಗಲಿ ಇವೆಲ್ಲವೂ ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಮರೆಮಾಚುವ ತಂತ್ರಗಳೇ ಹೊರತು ಇನ್ನೇನಲ್ಲ. ರೈತರನ್ನು ದೇಶದ ಬೆನ್ನೆಲುಬು ಎಂದು ಅಟ್ಟಕ್ಕೇರಿಸುವ ಸರ್ಕಾರ, ಅವರ ಕೃಷಿ ಕಾರ್ಯಗಳಿಗೆ ಹೇಗೆ ಸ್ಪಂದಿಸುತ್ತಿದೆ ಎಂಬುದನ್ನು ತಿಳಿದುಕೊಂಡರೂ ಸಾಕು, ಈ ಸರ್ಕಾರ ಯಾಕೆ ಹಿಜಾಬು, ಭಗವದ್ಗೀತೆ, ಕ್ಲಾಕ್ ಟವರ್, ಮದ್ರಸಾಗಳ ಹಿಂದೆ ಬಿದ್ದಿದೆ ಎಂಬುದು ಗೊತ್ತಾಗು ತ್ತದೆ. ಯಾವುದೇ ರೈತ ತನ್ನ ಗದ್ದೆಯಲ್ಲಿ ಕೆಲಸ ಮಾಡುವುದು ಹಗಲು ವೇಳೆ. ರಾಜ್ಯದ 191 ಲಕ್ಷ ಹೆಕ್ಟೇರ್ ಭೂಪ್ರದೇಶದ ಪೈಕಿ 65% ಕೃಷಿ ಜಮೀನಿದೆ. ಈ ಕೃಷಿ ಪದ್ಧತಿಗೆ ಬಾವಿ ಮತ್ತು ಬೋರ್ವೆಲ್ ವ್ಯವಸ್ಥೆಯನ್ನೇ ರೈತರು ಹೆಚ್ಚಾಗಿ ಅವಲಂಬಿಸಿದ್ದಾರೆ. ಇದಕ್ಕೆ ವಿದ್ಯುತ್ ಬೇಕು. ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ವಿದ್ಯುತ್ ಸಂಪರ್ಕ ಪಡೆದ ಅಧಿಕೃತ ಪಂಪ್ಸೆಟ್ಗಳಿವೆ. ಬಹುತೇಕ ಜಿಲ್ಲೆಗಳಲ್ಲಿ ಈ ಪಂಪ್ಗಳಿಗೆ ರಾತ್ರಿ ಸಮಯಯಲ್ಲಿ ತ್ರಿ ಫೇಸ್ ವಿದ್ಯುತನ್ನು ನೀಡಲಾಗುತ್ತದೆ. ಇದರಿಂದ ಆಗುತ್ತಿರುವ ಸಮಸ್ಯೆ ಏನೆಂದರೆ, ರೈತರು ನಿದ್ದೆಗೆಟ್ಟು ರಾತ್ರಿವೇಳೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇದರ ಜೊತೆಗೇ ರೈತರು ವಿಷಜಂತುಗಳಿಗೆ ಬಲಿಯಾದ ಉದಾಹರಣೆಯೂ ಇದೆ. ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆ 7 ತಾಸು ತಡೆರಹಿತ ವಿದ್ಯುತ್ ಒದಗಿಸಬೇಕು ಎಂದು ಸೂಚನೆ ನೀಡಿರುವ ಸರ್ಕಾರ ನಡಕೊಳ್ಳುತ್ತಿರುವ ರೀತಿ ಇದು. ಇನ್ನೊಂದೆಡೆ,
ಕೃಷಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪ ಸಂಸತ್ನಲ್ಲಿದೆ. ಈ ತಿದ್ದುಪಡಿಯೇನಾದರೂ ನಡೆದುಬಿಟ್ಟರೆ ಕೃಷಿ ಪಂಪ್ಸೆಟ್ಗಳಿಗೂ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಅವಕಾಶ ದೊರೆಯಲಿದೆ. ಈ ಹಿಂದಿನ ಎಲ್ಲ ಸರ್ಕಾರಗಳೂ ರೈತರಿಗೆ ಉಚಿತ ವಿದ್ಯುತ್ ಒದಗಿಸುತ್ತಾ ಬಂದಿದ್ದುವು. ಆದರೆ, ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವುದರ ವಿರುದ್ಧ ಬೊಮ್ಮಾಯಿ ಸರ್ಕಾರ ಯಾವ ಮಾತನ್ನೂ ಆಡುವಂತಿಲ್ಲವಾದ ಕಾರಣ, ಅಂತಿಮವಾಗಿ ಸಮಸ್ಯೆಗೆ ತುತ್ತಾಗುವುದು ರೈತರು. ಆದ್ದರಿಂದಲೇ, ರೈತರು ಈ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ರೈತ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯದ ರೈತರು ಪ್ರತಿಭಟನೆ ಘೋಷಿಸಿದ್ದಾರೆ. ಮಳೆಗಾಲ ಆಗಮಿಸುತ್ತಿದೆ. ಡಾಮರು ಕಿತ್ತು ಹೋಗಿರುವ ರಸ್ತೆಗಳು ವಾಹನ ಸವಾರರಿಗೆ ಸವಾಲು ಒಡ್ಡುತ್ತಿವೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆಯಲ್ಲಿ ಆಗಿರುವ ಹೆಚ್ಚಳಕ್ಕೆ ಇನ್ನಷ್ಟು ಸೇರ್ಪಡೆಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಆಳುವ ಪಕ್ಷದ ಸಚಿವರು ಮತ್ತು ಶಾಸಕರು ಅಭಿವೃದ್ಧಿ ಕಾರ್ಯವನ್ನು ಮರೆತು ಓಡಾಡುತ್ತಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿಯವರದ್ದು ಬೇರೆಯದೇ ಸಮಸ್ಯೆ. ಅವರು ಮೂಲ ಬಿಜೆಪಿಗರಲ್ಲದ ಕಾರಣ ಆಗಾಗ ತನ್ನ ಪಕ್ಷ ನಿಷ್ಠೆಯನ್ನು ವ್ಯಕ್ತಪಡಿಸುತ್ತಲೇ ಇರಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಉಕ್ರೇನ್ ನಿಂದ ವಾಪಸಾದ ವಿದ್ಯಾರ್ಥಿಗಳ ಪುನರ್ ಶಿಕ್ಷಣ ಮತ್ತು ನೀಟ್ ಪರೀಕ್ಷೆಯ ಬಗ್ಗೆ ಎದ್ದಿರುವ ತಕರಾರುಗಳು ಸಾರ್ವಜನಿಕ ಚರ್ಚೆಯಾಗದಂತೆ ನೋಡಿಕೊಳ್ಳಬೇಕಾದರೆ ಮುಸ್ಲಿಮ್ ಇಶ್ಶೂಗಳನ್ನು ಮುಂದಕ್ಕೆ ತರಲೇ ಬೇಕಾದ ಅನಿವಾರ್ಯತೆ ಬಿಜೆಪಿಗಿದೆ. ಕ ರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ ಸಮವಸ್ತ್ರ ಒದಗಿಸದೇ ಎರಡು ವರ್ಷಗಳಾದುವು ಎಂಬ ಮಾಹಿತಿ ಇತ್ತೀಚೆಗಷ್ಟೇ ಸುದ್ದಿಗೀಡಾಗಿದ್ದುವು. ಹರಿದ ಮತ್ತು ಮಾಸಿದ ಸಮವಸ್ತ್ರ ವನ್ನೇ ಅವರು ಧರಿಸುತ್ತಿದ್ದಾರೆ ಎಂಬ ಮಾಹಿತಿಗಳು ಹೊರಬಿದ್ದಿದ್ದುವು. ಸಮವಸ್ತ್ರ ಧರಿಸದಿದ್ದರೆ ದಂಡ ಹಾಕುವ ಪದ್ಧತಿ ಇರುವುದರಿಂದ ತೇಪೆ ವಸ್ತ್ರವನ್ನು ಧರಿಸದೇ ಅವರಿಗೆ ಬೇರೆ ದಾರಿಯೂ ಇಲ್ಲ. ಹಾಗೆಯೇ, ಸರ್ಕಾರಿ ಶಾಲೆ-ಕಾಲೇಜುಗಳು ಮೂಲಭೂತ ಸೌಲಭ್ಯಗಳಿಂದ ಬಹುತೇಕ ವಂಚಿತವಾಗಿದ್ದು, ವಿದ್ಯಾರ್ಥಿನಿಯರು ಮೂತ್ರ ಕಟ್ಟಿಕೊಂಡು ಬದುಕುತ್ತಿರುವ ಸುದ್ದಿಗಳೂ ಆಗಾಗ ವರದಿಯಾಗುತ್ತಿವೆ. ಉಚಿತ ಸ್ಯಾನಿಟರಿ ಪ್ಯಾಡ್ ಒದಗಿಸುವುದೂ ನಿಂತು ಹೋಗಿರುವ ಬಗ್ಗೆ ಇತ್ತೀಚೆಗಷ್ಟೇ ಗಮನ ಸೆಳೆಯುವ ವರದಿ ಬಹಿರಂಗಗೊಂಡಿತ್ತು. ನಿಜವಾಗಿ,
ಈ ಭಗವದ್ಗೀತೆ, ಮದ್ರಸ, ಕ್ಲಾಕ್ ಟವರ್, ಹಿಜಾಬ್, ಕೇಸರಿ ಧ್ವಜ ಇತ್ಯಾದಿಗಳೆಲ್ಲವೂ ಬಿಜೆಪಿಯ ರಾಜಕೀಯ ತಂತ್ರಗಳೇ ಹೊರತು ಇ ನ್ನೇನಲ್ಲ. ಹಿಂದೂ-ಮುಸ್ಲಿಮ್ ಬಿಂದುವಿನಲ್ಲಿ ನಿಂತು ಚರ್ಚಿಸುವುದಕ್ಕೆ ಸೂಕ್ತವಾದ ವಿಷಯಗಳನ್ನು ಅದು ಆಗಾಗ ತನ್ನ ಬುಟ್ಟಿಯಿಂದ ಹೊರಬಿಡುತ್ತಲೇ ಇರುತ್ತದೆ. ಜನರ ಗಮನವನ್ನು ಇಂಥ ವಿಷಯಗಳ ಮೇಲೆ ಕೇಂದ್ರೀಕರಿಸುವುದೇ ಇದರ ಉದ್ದೇಶ. ದ ಕಾಶ್ಮೀರ್ ಫೈಲ್ಸ್ ಕೂಡಾ ಇಂಥದ್ದೇ ಒಂದು ಷಡ್ಯಂತ್ರದ ಭಾಗ. ರಾಜ್ಯ ಸರ್ಕಾರ ಈ ಸಿನಿಮಾಕ್ಕೆ ತರಾತುರಿಯಿಂದ ತೆರಿಗೆ ವಿನಾಯಿತಿ ಘೋಷಿಸಿರುವುದಕ್ಕೆ ಅದು ಹಿಂದೂ-ಮುಸ್ಲಿಮ್ ಕತೆಯನ್ನಾಧರಿಸಿದ ಸಿನಿಮಾ ಎಂಬುದೇ ಕಾರಣ. ಮುಸ್ಲಿಮರು ಕಾಶ್ಮೀರಿ ಪಂಡಿತರ ವಿರುದ್ಧ ಕ್ರೂರವಾಗಿ ನಡೆದುಕೊಂಡಿದ್ದಾರೆ ಎಂಬ ಕತೆಯುಳ್ಳ ಸಿನಿಮಾವು ಮುಸ್ಲಿಮರ ಸುತ್ತ ಚರ್ಚೆಯೊಂದನ್ನು ಹುಟ್ಟು ಹಾಕುವುದರಿಂದ ಬಿಜೆಪಿಗೆ ಲಾಭ ಇದೆ. ಒಂದು ವೇಳೆ, ದಮನಿತರ ಮೇಲಿನ ಪ್ರೀತಿಯೇ ಈ ರಿಯಾಯಿತಿಗೆ ಕಾರಣ ಎಂದಾದರೆ, ಈ ಮೊದಲು ಬಿಡುಗಡೆಯಾದ ಜೈ ಭೀಮ್ ಸಿನಿಮಾಕ್ಕೂ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಬಹುದಿತ್ತು. ದಲಿತ ಸಮುದಾಯದ ಮೇಲೆ ಬಲಿಪಶು ಮತ್ತು ಪ್ರಭುತ್ವದ ದಮನ ನೀತಿಯನ್ನು ಹೇಳುವ ಆ ಸಿನಿಮಾ ಕೂಡ ನಿಜ ಕತೆಯನ್ನೇ ಆಧರಿಸಿತ್ತು. ಅಂದಹಾಗೆ,
ಮುಸ್ಲಿಮ್ ದ್ವೇಷವು ಬಿಜೆಪಿಯ ವೈಫಲ್ಯಗಳನ್ನು ದೀರ್ಘ ಸಮಯದ ವರೆಗೆ ಮುಚ್ಚಿಡಲು ಶಕ್ತವಾಗಬಲ್ಲುದು ಎಂದು ಹೇಳಲಾಗದು. ಕೃತ್ರಿಮವಾಗಿ ಬೆಳೆಸಲಾಗುವ ಯಾವುದೇ ದ್ವೇಷಕ್ಕೂ ಪ್ರೀತಿಗೂ ಒಂದು ಮಿತಿಯಿದೆ. ಒಂದು ಹಂತದಲ್ಲಿ ಅದು ತಿರುಗಿ ಬೀಳಲಿದೆ. ಸುಳ್ಳಿಗೆ ದೀರ್ಘಾಯುಷ್ಯ ವಿಲ್ಲ. ಸತ್ಯದ ಎದುರು ಪ್ರಭುತ್ವ ಕಟ್ಟಿ ಬೆಳೆಸಿದ ಸುಳ್ಳಿನ ಗೋಪುರ ಒಂದು ದಿನ ಒಡೆದು ಬೀಳುವುದು ನಿಶ್ಚಿತ. ಜನರು ನಿಜ ಸಮಸ್ಯೆಗಳ ಬಗ್ಗೆ ಕಣ್ತೆರೆದ ದಿನದಿಂದ ಇದು ಆರಂಭವಾಗಲಿದೆ.












