ಸನ್ಮಾರ್ಗ ವಾರ್ತೆ
ಬೆಂಗಳೂರು: ‘ಸ್ಫೂರ್ತಿಧಾಮ’ವನ್ನು ನಿರ್ವಹಿಸುತ್ತಿರುವ ‘ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್’ ವತಿಯಿಂದ ‘ಬೋಧಿವೃಕ್ಷ’ ಮತ್ತು ‘ಬೋಧಿವರ್ಧನ’ ಪ್ರಶಸ್ತಿಗಾಗಿ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯನ್ನು ಏಪ್ರಿಲ್ 14, 2022ರಂದು ನಡೆಯಲಿರುವ ‘ಅಂಬೇಡ್ಕರ್ ಹಬ್ಬ’ದಲ್ಲಿ ನೀಡಲಾಗುತ್ತದೆ.
ಹಲವು ವರ್ಷಗಳಿಂದ ಅಂಬೇಡ್ಕರ್ ಜಯಂತಿಯನ್ನು ‘ಅಂಬೇಡ್ಕರ್ ಹಬ್ಬವಾಗಿ ಆಚರಿಸಿಕೊಂಡು ಬರುತ್ತಿರುವ ‘ಸ್ಫೂರ್ತಿಧಾಮ’ವು ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿದವರನ್ನು ಗುರುತಿಸುವ, ಗೌರವಿಸುವ ಸಲುವಾಗಿ ಒಂದು ‘ಬೋಧಿವೃಕ್ಷ’ ಮತ್ತು ಐದು ‘ಬೋಧಿವರ್ಧನ’ ಪ್ರಶಸ್ತಿಗಳನ್ನು ನೀಡುತ್ತಿದೆ.
‘ಬೋಧಿವೃಕ್ಷ’ ಪ್ರಶಸ್ತಿಗೆ ಒಂದು ಲಕ್ಷ ರೂ. ನಗದು ಮತ್ತು ‘ಬೋಧಿವರ್ಧನ ಪ್ರಶಸ್ತಿಗೆ ತಲಾ ಇಪ್ಪತೈದು ಸಾವಿರ ರೂ. ನಿಗದಿಯಾಗಿದೆ.
ಈ ಪ್ರಶಸ್ತಿಗಳು ಹಲವು ಕಾರಣಗಳಿಗಾಗಿ ವಿಭಿನ್ನವಾಗಿದೆ. ರಾಷ್ಟ್ರ, ಮತ್ತು ರಾಜ್ಯಮಟ್ಟದ ಸರ್ಕಾರಿ, ಅರೆಸರ್ಕಾರಿ, ಪ್ರತಿಷ್ಠಿತ ಅಕಾಡೆಮಿಗಳು, ಸಂಘ-ಸಂಸ್ಥೆಗಳು ಕೊಡುವ ಅನೇಕ ಪ್ರಶಸ್ತಿಗಳಿವೆ. ಆದರೆ, ಆರ್ಥಿಕ, ಸಾಮಾಜಿಕ, ರಾಜಕೀಯ ಅಥವ ಶೈಕ್ಷಣಿಕ ಬಂಡವಾಳವಿಲ್ಲದೆ ತಳಸ್ತರದವರ ಬದುಕನ್ನು ಗುಣಾತ್ಮಕವಾಗಿ ವಿಸ್ತರಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವವರನ್ನು ಗೌರವಿಸುವ ಪ್ರಶಸ್ತಿಗಳು ನಮ್ಮಲಿಲ್ಲ. ಸಮಾಜದೊಂದಿಗೆ ಇಂಥ ಸಾವಯವ ಸಂಬಂಧವನ್ನು ಸ್ಥಾಪಿಸಿಕೊಂಡವರನ್ನು ಸನ್ಮಾನಿಸುವ ಮೂಲಕ ‘ಸ್ಫೂರ್ತಿಧಾಮ’ ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳಲು ಬಯಸುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿದವರ ಬಗ್ಗೆ ತಿಳಿದಿದ್ದರೆ, ಅವರ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಬಹುದು ಅಥವ ದುಡಿಯುವವರಲ್ಲಿ ನೀವೇ ಆಗಿದ್ದರೂ ಸಂಪೂರ್ಣ ಮಾಹಿತಿಯನ್ನು ತಮಗೆ ನೀಡಬಹುದು. ಮಾಹಿತಿ ನೀಡಲು ಕೊನೆಯ ದಿನಾಂಕ ಮಾರ್ಚ್ 31,2022 ಎಂದು ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸ್ಫೂರ್ತಿಧಾಮ, ಅಂಜನಾನಗರ, ಮಾಗಡಿ ರಸ್ತೆ, ವಿಶ್ವನೀಡಂ ಅಂಚೆ, ಬೆಂಗಳೂರು-560 091 e-mail: [email protected] ಅಥವಾ ಮೊಬೈಲ್ ಸಂಖ್ಯೆ 9108830438, 9108830437 ಯನ್ನು ಸಂಪರ್ಕಿಸಲು ಸಂಘಟಕರು ತಿಳಿಸಿದ್ದಾರೆ.












