ಮೈಸೂರು: ಗುರುಕುಲದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಮ್ಯಾನೇಜರ್ ಬಂಧನ

0
347

ಸನ್ಮಾರ್ಗ ವಾರ್ತೆ

ಮೈಸೂರು: ಇಲ್ಲಿಗೆ ಸಮೀಪದ ಹೆಬ್ಬಾಳ ಎಂಬಲ್ಲಿನ ಗುರುಕುಲವೊಂದರಲ್ಲಿ ಅಪ್ರಾಪ್ತೆಯೋರ್ವಳಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಸಂಸ್ಥೆಯ ಮ್ಯಾನೇಜರ್‌ನನ್ನು ಬಂಧಿಸಲಾಗಿದೆ.

ಘಟನೆಯ ಸಂಬಂಧ ಗಿರೀಶ್ (40) ಎಂಬಾತನನ್ನು ಬುಧವಾರ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೈಸೂರಿನ ಹೆಬ್ಬಾಳದ ಇನ್ ಫೋಸಿಸ್ ಬಳಿ ಗುರುಕುಲ ಸಂಸ್ಥೆಯಿದೆ. ಗುರುಕುಲವು ರಾಜ್ಯದ ಹಲವು ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ. ಗುರುಕುಲವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತ್ತು ಬಡ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ, ವಸತಿ ಮತ್ತು ಆಹಾರವನ್ನು ಒದಗಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುಕುಲದಲ್ಲಿ ಸಂಗೀತ ಶಿಕ್ಷಕಿಯನ್ನು ನೇಮಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಮ್ಯಾನೇಜರ್ ನ ದುರ್ವರ್ತನೆಯನ್ನು ಗಮನಿಸಿದ ಸಂಗೀತ ಶಿಕ್ಷಕಿ ಮಕ್ಕಳ ಕಲ್ಯಾಣ ಸಮಿತಿಗೆ ಸಾಕ್ಷ್ಯ ಸಹಿತ ವರದಿ ನೀಡಿದ್ದಾರೆ.

ದೂರಿನ ಮೇರೆಗೆ ಸಮಿತಿಯ ಸದಸ್ಯರು ಗುರುಕುಲಕ್ಕೆ ಭೇಟಿ ನೀಡಿ ಸಂತ್ರಸ್ತ ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಂಡರು. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮ್ಯಾನೇಜರ್ ವಿರುದ್ಧದ ಆರೋಪಗಳು ನಿಜವಾದವು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾಲಕಿಯರನ್ನು ಅಬ್ಸರ್ವೇಶನ್ ಹೋಮ್ ಮತ್ತು ಬಾಪೂಜಿ ಚಿಲ್ಡ್ರನ್ಸ್ ಹೋಮ್‌ಗೆ ಸ್ಥಳಾಂತರಿಸಲಾಗಿದೆ.