ಯೋಗಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದ ಎಸ್‌ಪಿ ಶಾಸಕನ ಪೆಟ್ರೋಲ್‌ ಪಂಪ್ ಮೇಲೆ ಬುಲ್ಡೋಜರ್ ಪ್ರಹಾರ

0
349

ಸನ್ಮಾರ್ಗ ವಾರ್ತೆ

ಬರೇಲಿ:ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಶಾಸಕ ಶಾಜಿಲ್ ಇಸ್ಲಾಂ ಅನ್ಸಾರಿಯವರಿಗೆ ಸೇರಿದ್ದ ಪೆಟ್ರೋಲ್ ಪಂಪ್‌ಅನ್ನು ಗುರುವಾರ ಧ್ವಂಸಗೊಳಿಸಲಾಗಿದೆ.

ಬರೇಲಿ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪರ್ಸಖೇಡಾದಲ್ಲಿನ ಪೆಟ್ರೋಲ್‌ ಪಂಪ್‌ ಅನ್ನು ಬುಲ್ಡೋಜರ್ ಬಳಸಿ ಬರೇಲಿ ಅಭಿವೃದ್ಧಿ ಪ್ರಾಧಿಕಾರವು(ಬಿಡಿಎ) ಕೆಡವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಡಿಎ ಉಪಾಧ್ಯಕ್ಷ ಜೋಗೇಂದ್ರ ಸಿಂಗ್ ಮಾತನಾಡಿ, ಅನ್ಸಾರಿ ಅವರ ಪೆಟ್ರೋಲ್ ಪಂಪ್ ಅಕ್ರಮವಾಗಿತ್ತು. ಅಲ್ಲದೇ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿತ್ತು ಎಂದಿದ್ದಾರೆ.

ಕಳೆದ ಶುಕ್ರವಾರ ತಮ್ಮ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಅನ್ಸಾರಿ, ‘ವಿಧಾನಸಭೆಯಲ್ಲಿ ನಮ್ಮ ಪಕ್ಷದ ಬಲ ಹೆಚ್ಚಾಗಿದೆ. ಆದಿತ್ಯನಾಥ್ ಸದ್ದು ಮಾಡಿದರೆ, ಎಸ್‌ಪಿ ಬಂದೂಕುಗಳು ಕೇವಲ ಹೊಗೆ ಹೊರಸೂಸುವುದಿಲ್ಲ, ಬದಲಿಗೆ ಬುಲೆಟ್‌ಗಳು ಹಾರಲಿವೆ’ ಎಂದು ಹೇಳಿದ್ದರು. ಸರ್ಕಾರದ ವಿರುದ್ಧ ಅನ್ಸಾರಿ ಇತ್ತೀಚೆಗೆ ನೀಡಿದ್ದ ಹೇಳಿಕೆ ಸಂಬಂಧ ಬರೇಲಿಯ ಬರದರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದಾಗಿ ವಾರ ಕಳೆಯುವುದರ ಒಳಗಾಗಿ ಅನ್ಸಾರಿಯವರ ಪೆಟ್ರೋಲ್‌ ಪಂಪ್‌ ಅನ್ನು ಸ್ಥಳೀಯ ಪ್ರಾಧಿಕಾರ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದೆ.