ಸನ್ಮಾರ್ಗ ವಾರ್ತೆ
ಭೋಪಾಲ: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ರಿಗೆ ಬಿಸಿ ಆರಿದ ಚಹಾ ಪೂರೈಸಿದಕ್ಕಾಗಿ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ವಿಐಪಿ ಕರ್ತವ್ಯದ ನಿಬಂಧನೆ ಉಲ್ಲಂಘಿಸಿದ ಆರೋಪದಲ್ಲಿ ಜೂನಿಯರ್ ಸಪ್ಲೈ ಆಫಿಸರ್ ರಾಖೇಶ್ ಕನೌಹರ್ಗೆ ನೋಟಿಸು ನೀಡಲಾಗಿದೆ. ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟರ್ ಡಿಪಿ ದ್ವಿವೇದಿ ಕಾರಣ ಕೇಳಿ ನೋಟಿಸು ಜಾರಿ ಮಾಡಿದ್ದಾರೆ.
ಮೂರು ದಿವಸದೊಳಗೆ ಉತ್ತರಿಸಬೇಕು ಇಲ್ಲದಿದ್ದರೆ ಕ್ರಮ ಜರಗಿಸಲಾಗುವುದು ಎಂದು ನೋಟಿಸಿನಲ್ಲಿ ತಿಳಿಸಲಾಗಿದೆ. ಆದರೆ, ಶೋಕಾಸ್ ನೋಟಿಸಿನ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿರೋಧ ಕೇಳಿ ಬಂದ ನಂತರ ಅಧಿಕಾರಿಗಳು ನೋಟಿಸನ್ನು ಹಿಂಪಡೆಯುತ್ತೇವೆ ಎಂದು ಹೇಳಿದ್ದಾರೆ.
ಸೋಮವಾರ ಸ್ಥಳೀಯಾಡಳಿತ ಚುನಾವಣೆಗೆ ಸಂಬಂಧಿಸಿದ ಪ್ರಚಾರಗಳ ನಂತರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬೆಳಗ್ಗಿನ ಉಪಹಾರ ಸ್ವೀಕರಿಸುವ ವೇಳೆ ತಣ್ಣಗಾದ ಚಾ ಪೂರೈಕೆಯಾಗಿತ್ತು. ವಿಮಾನ ನಿಲ್ದಾಣದ ವಿಐಪಿಯ ಆರಾಮ ಕೊಠಡಿಯಲ್ಲಿ ಈ ಘಟನೆ ನಡೆದಿತ್ತು. ಅಲ್ಲಿ ಮುಖ್ಯಮಂತ್ರಿ ಹೆಚ್ಚು ಸಮಯ ಇರಲಿಲ್ಲ ಅವರು ಚಾ ಕುಡಿದಿಲ್ಲ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು.












