ಸನ್ಮಾರ್ಗ ವಾರ್ತೆ
ಮಂಗಳೂರು: ಪಠ್ಯಪುಸ್ತಕದ ಬಗ್ಗೆ ಸುಳ್ಳು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಚಿವ ಕೋಟಾ ಹಾಗೂ ಸುನೀಲ್ ಕುಮಾರ್ ದಕ್ಷಿಣ ಕನ್ನಡ ಜಿಲ್ಲಾ ಜನತೆಯ ಬಳಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಆಗ್ರಹಿಸಿದ್ದಾರೆ.
ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಪುಸ್ತಕದಲ್ಲಿ ಬ್ರಹ್ಮರ್ಷಿ ನಾರಾಯಣ ಗುರು ಪಠ್ಯ ತೆಗೆದುಹಾಕಿದ ವಿಚಾರಕ್ಕೆ ಸಂಬಂಧಪಟ್ಟಂತೆ ವಿವಾದವೆದ್ದಾಗ ದಕ್ಷಿಣಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್ “ಪಠ್ಯವನ್ನು ತೆಗೆದಿಲ್ಲ. ಕಾಂಗ್ರೆಸ್ನವರು ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ” ಎಂದಿದ್ದರು.
ಇದೀಗ, ಶಿಕ್ಷಣ ಸಚಿವರು ಸಮಾಜ ವಿಜ್ಞಾನ ವಿಷಯದಲ್ಲಿ ನಾರಾಯಣ ಗುರುಗಳ ಪಾಠವನ್ನು ಮರು ಸೇರಿಸುವಂತೆ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಸಚಿವ ಕೋಟಾ, ಸುನೀಲ್ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ ಜನರ ಭಾವನೆ ಜೊತೆಗೆ ಚೆಲ್ಲಾಟವಾಡಿದ್ದಾರೆ. ಆದ್ದರಿಂದ ಅವರು ಜಿಲ್ಲೆಯ ಜನತೆಯ ಕ್ಷಮೆ ಕೇಳಬೇಕು ಎಂದರು.
ಅಂದು ನಾವು ಮಾಡಿದ ಹೋರಾಟದ ಪ್ರತಿಫಲದಿಂದಾಗಿ ಸಮಾಜ ವಿಜ್ಞಾನ ಪಠ್ಯದಲ್ಲಿ ಬ್ರಹ್ಮರ್ಷಿ ನಾರಾಯಣಗುರು ಪಾಠ ಸೇರಿದೆ. ಇನ್ನೂ ಕೂಡ ಪಠ್ಯಪುಸ್ತಕದಲ್ಲಿ ಹಲವಾರು ತಪ್ಪುಗಳಿವೆ. ಆ ತಪ್ಪುಗಳನ್ನು ಸದ್ಯದಲ್ಲೇ ಬಯಲು ಮಾಡುತ್ತೇವೆ ಎಂದು ಅವರು ಹೇಳಿದರು.
ನಿನ್ನೆ ಮಳೆ ಹಾನಿ ಪರಿಶೀಲಿಸಲು ಜಿಲ್ಲೆಗೆ ಭೇಟಿ ನೀಡಿದ ಸಿಎಂ ಮೂಲ್ಕಿ-ಮೂಡಬಿದ್ರೆ ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂದು ಇದೇ ವೇಳೆ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ನವೀನ್ ಡಿಸೋಜ, ಪ್ರವೀಣಚಂದ್ರ ಆಳ್ವ, ಅನಿಲ್ ಕುಮಾರ್, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ಹಾಗೂ ನಜೀರ್ ಬಜಾಲ್ ಇದ್ದರು.












