ಸನ್ಮಾರ್ಗ ವಾರ್ತೆ
ರಾಜ್ಯದ ವಿವಿಧೆಡೆ 13,8೦0 ಸರಕಾರಿ ಶಾಲೆಗಳನ್ನು ವಿಲೀನ ಗೊಳಿಸಲಾಗುತ್ತಿದೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಈ ಬಗ್ಗೆ ಹೇಳಿಕೆ ನೀಡಿದ್ದರು. ಸಚಿವರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಶಿಕ್ಷಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಶಿಕ್ಷಕ ವೀರಣ್ಣ ಮಡಿವಾಳರ ರವರಿಗೆ ನೋಟೀಸು ನೀಡಲಾಗಿದೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನೀಡಿದ್ದ ಹೇಳಿಕೆಯನ್ನು ಟೀಕಿಸಿ, 13800 ಶಾಲೆ ವಿಲೀನ ಅಲ್ಲ ಅಷ್ಟು ಶಾಲೆಗಳ ಹತ್ಯಾಕಾಂಡ, ಸರಕಾರಿ ಶಾಲಾ ಮಕ್ಕಳ ಮಾರಣ ಹೋಮ ಎಂದು ರಾಯಬಾಗದ ನಿಡಗುಂದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ವೀರಣ್ಣ ಮಡಿವಾಳರ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಅಂತರ್ಜಾಲದಲ್ಲಿ ಹರಿಬಿಟ್ಟಿದ್ದರು. ಇದು ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ಕ್ಕೆ ವ್ಯತಿರಿಕ್ತವಾಗಿದ್ದು ಅಲ್ಲದೆ ನಡತೆ ನಿಯಮಗಳು 1966ರ ನಿಯಮ 3ನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದ್ದು ಈ ಕುರಿತು ನಿಮ್ಮ ಮೇಲೆ ಶಿಸ್ತು ಕ್ರಮ ಏಕೆ ಜರಗಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಚಿಕ್ಕೋಡಿ ವಿಭಾಗದ ಉಪ ನಿರ್ದೇಶಕ ಎಂ.ಎಲ್.ಹಂಚಾಟೆ 2022ರ ಜುಲೈ 22ರಂದು ನೋಟಿಸ್ ಜಾರಿಗೊಳಿಸಿದ್ದಾರೆ.
ಶಾಲೆಗಳ ವಿಲೀನ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಶಿಕ್ಷಕರಿಗೆ ನೋಟೀಸ್ ಜಾರಿಗೊಳಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುತ್ತಿದೆ ಎಂಬ ಟೀಕೆಗಳು ಇದೀಗ ಮುನ್ನೆಲೆಗೆ ಬಂದಿವೆ.
ಕವಿಯೂ ಆಗಿರುವ ವೀರಣ್ಣ ಮಡಿವಾಳರ ಅವರು ಸರಕಾರಿ ಶಾಲೆಯಲ್ಲಿದ್ದ ಮೂಲ ಸೌಕರ್ಯಗಳ ಕೊರತೆ ನೀಗಿಸಿ ಶಾಲೆಗೆ ಮಕ್ಕಳನ್ನು ಆಕರ್ಷಿಸಿದ್ದರು. ಇವರ ಪರಿಶ್ರಮ ಮತ್ತು ಆಸಕ್ತಿ ಫಲವಾಗಿ ನಿಡಗುಂದಿಯ ಈ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗಿದ್ದರು. ಇವರ ಕಾರ್ಯವೈಖರಿಯನ್ನು ಮೆಚ್ಚಿದ್ದ ಹಿಂದಿನ ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್, ಅವರನ್ನು ಅಭಿನಂದಿಸಿದ್ದರು.













