ಚೆಸ್ ಆಡುವಾಗ ಬಾಲಕನ ಬೆರಳು ಮುರಿದ ರೋಬೋಟ್! ವಿಡಿಯೋ ವೈರಲ್

0
399

ಸನ್ಮಾರ್ಗ ವಾರ್ತೆ

ಏಳು ವರ್ಷದ ಬಾಲಕನೊಂದಿಗೆ ಚೆಸ್ ಆಡುತ್ತಿದ್ದ ರೊಬೋಟ್ ಒಂದು ಬಾಲಕನ ಬೆರಳನ್ನು ಮುರಿದು ಹಾಕಿದೆ. ಈ ಅಘಾತಕಾರಿ ಘಟನೆ ಮಾಸ್ಕೋದಲ್ಲಿ ನಡೆದಿದೆ.

ರೋಬೋಟ್ ಬಾಲಕನ ಮೇಲೆ ದಾಳಿ ಮಾಡುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜುಲೈ ೧೯ರಂದು ರಷ್ಯಾದಲ್ಲಿ ನಡೆದ ಮಾಸ್ಕೋ ಚೆಸ್ ಓಪನ್ ಟೂರ್ನಿ ಸಂದರ್ಭದಲ್ಲಿ ಚೆಸ್ ಆಡುವ ರೋಬೋ ಏಳು ವರ್ಷದ ಕ್ರಿಸ್ಟೋಫರ್ ಎಂಬ ಬಾಲಕನ ಬೆರಳು ಹಿಡಿದು ಬಲವಾಗಿ ಹಿಂಡಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಬಾಲಕನ ಆತುರದಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ರೋಬೋಟ್ ತನ್ನ ಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯವಾದ ಸಮಯಾವಕಾಶ ನೀಡದೇ ಬಾಲಕ ತ್ವರಿತವಾಗಿ ಪಾನ್ ಮೂವ್ ಮಾಡಲು ಮುಂದಾದಾಗ ಈ ಘಟನೆ ಸಂಭವಿಸಿದೆ.

ರೋಬೋ ಜೊತೆಗೆ ಆಡುವಾಗ ಕೆಲವು ಸುರಕ್ಷತಾ ನಿಯಮಗಳಿದ್ದು ಬಾಲಕ ಆತುರದಿಂದ ಅದನ್ನು ಉಲ್ಲಂಘಿಸಿದ್ದಾನೆ. ರೋಬೋ ಮೂವ್‌ಗೆ ಕಾಯಬೇಕೆಂದು ಗಮನಿಸಲಿಲ್ಲ. ಇದು ಅತ್ಯಂತ ಅಪರೂಪದ ಪ್ರಕರಣವಾಗಿದೆ. ಆ ಬಾಲಕ ಚೇತರಿಸಿಕೊಂಡಿದ್ದು ಬೆರಳಿಗೆ ಪ್ಲಾಸ್ಟರ್ ಹಾಕಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ.