ನೂರು ಕೋಟಿಗೆ ರಾಜ್ಯಸಭಾ ಸೀಟು, ರಾಜ್ಯಪಾಲ ಸ್ಥಾನಮಾನ! ನಾಲ್ವರ ಬಂಧನ

0
319

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ನೂರು ಕೋಟಿ ರೂಪಾಯಿ ರಾಜ್ಯಸಭಾ ಸದಸ್ಯತ್ವ ಸೀಟು, ರಾಜ್ಯಪಾಲ ಸ್ಥಾನಮಾನ ಸಹಿತ ನೀಡುವ ವಾಗ್ದಾನ ನೀಡಿ ವಂಚಿಸಿದ ತಂಡದ ನಾಲ್ವರನ್ನು ಸಿಬಿಐ ಬಂಧಿಸಿದೆ. ಕಾರ್ಯಾಚರಣೆ ನಡೆಸಿದ ಸಿಬಿಐ ಅಧಿಕಾರಿಯನ್ನು ಆಕ್ರಮಿಸಿ ಓರ್ವ ಆರೋಪಿ ಪರಾರಿಯಾಗಿದ್ದಾನೆ.

ಮಹಾರಾಷ್ಟ್ರದ ಕಮಲಾಕರ್ ಪ್ರೇಮಕುಮಾರ ಬಂಡ್ಗರ್, ಕರ್ನಾಟಕದ ರವೀಂದ್ರ ವಿಠಲ್ ನಾಯಕ, ದಿಲ್ಲಿಯ ಮಹೇಂದ್ರ ಪಾಲ್ ಅರೋರ ಹಾಗೂ ಅಭಿಶೇಕ್ ಬೂರಾ ಎಂಬವರನ್ನು ಬಂಧಿಸಲಾಗಿದೆ. ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ  ನಡೆಸಿ  ಪರಾರಿಯಾದ ಮುಹಮ್ಮದ್ ರಿಯಾಝ್ ಖಾನ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿ ಉತ್ತರಪ್ರದೇಶ, ದಿಲ್ಲಿ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ. ಬಂಧಿತ ನಾಲ್ವರನ್ನು ಸಿಬಿಐ ವಿಶೇಷ ಕೋರ್ಟಿಗೆ ಹಾಜರುಪಡಿಸಿದ್ದು ಕೋರ್ಟು ಜಾಮೀನು ನೀಡಿದೆ.

ಉನ್ನತ ಸಿಬಿಐ ಅಧಿಕಾರಿಯೆಂದು ಹೇಳಿಕೊಂಡು ಬಂಡ್ಗರ್ ವಂಚನೆಯ ಪ್ಲಾನ್ ಮಾಡಿದ್ದ. ಹಣ ಕೊಟ್ಟರೆ ತಾನು ಉನ್ನತ ಪ್ರಭಾವ ಬಳಸಿ ಯಾವ ಕೆಲಸವನ್ನೂ ಮಾಡಿಕೊಡುವೆ ಎಂದು ಈತನೂ ಇತರ ಆರೋಪಿಗಳು ಹೇಳುತ್ತಿದ್ದರು. ನಂತರ ಮಧ್ಯವರ್ತಿಗಳಾಗಿ ವಂಚನೆಗೆ ಯತ್ನಿಸುತ್ತಿದ್ದರು.

ಕೇಂದ್ರ ಸಚಿವಾಲಯದ ಅಧೀನ ಸಂಸ್ಥೆಗಳಲ್ಲಿ ಚೇರ್ಮೆನ್ ಸ್ಥಾನವನ್ನೂ ಇವರು ವಾಗ್ದಾನ ಮಾಡಿದ್ದರು. ಸಿಬಿಐ ಅಧಿಕಾರಿ ಎಂದು ಬಂಡ್ಗರ್ ಪೊಲೀಸರನ್ನೇ ಬೆದರಿಸಿ ಪ್ರಕರಣದ ತನಿಖೆಯಲ್ಲಿ ಪ್ರಭಾವ ಬೀರಿರುವುದಾಗಿ ಸಿಬಿಐ ತಿಳಿಸಿದೆ.