ಸನ್ಮಾರ್ಗ ವಾರ್ತೆ
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ವಾರದೊಳಗೆ 3 ಹತ್ಯೆಗಳಾಗಿದ್ದು ಇದು ಅತ್ಯಂತ ಖಂಡನಾರ್ಹ. ಬೆಳ್ಳಾರೆಯ ಮಸೂದ್, ಪ್ರವೀಣ್ ನೆಟ್ಟಾರು ಮತ್ತು ಸುರತ್ಕಲ್ ನಲ್ಲಿ ಮುಹಮ್ಮದ್ ಫಾಝಿಲ್ ಎಂಬ ಯುವಕರು ಕ್ರೂರಿಗಳಿಗೆ ಬಲಿಯಾಗಿದ್ದಾರೆ. ದುರಂತ ಏನೆಂದರೆ, ಈ ಹತ್ಯೆಗಳ ಬಗ್ಗೆ ರಾಜ್ಯ ಸರಕಾರ ಅತ್ಯಂತ ಪಕ್ಷಪಾತದಿಂದ ವರ್ತಿಸುತ್ತಿದೆ. ಬೆಳ್ಳಾರೆಯ ಪ್ರವೀಣ್ ಮನೆಗೆ ಭೇಟಿ ಕೊಟ್ಟು 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಮುಖ್ಯಮಂತ್ರಿಗಳು ಕನಿಷ್ಠ ಅಲ್ಲೇ ಹತ್ತಿರದ ಮಸೂದ್ ಮನೆಗೆ ಭೇಟಿಯನ್ನೇ ಕೊಟ್ಟಿಲ್ಲ ಮತ್ತು ಪರಿಹಾರವನ್ನೂ ಘೋಷಿಸಿಲ್ಲ. ಇದು ರಾಜಧರ್ಮ ಅಲ್ಲ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ನಗರಾಧ್ಯಕ್ಷ ಕೆ ಎಂ ಅಶ್ರಫ್ ಹೇಳಿದರು.
ಹತ್ಯೆಯಿಂದ ಯಾವ ಧರ್ಮವೂ ಬೆಳೆಯದು. ಇದರಿಂದ ಯಾವುದೋ ಬಡವರ ಮನೆಯ ತಾಯಿಯೋ ತಂದೆಯೋ ಪತ್ನಿಯೋ ಮಕ್ಕಳೋ ಕಣ್ಣೀರಾಗುತ್ತಾರೆ. ಅನಾಥರಾಗುತ್ತಾರೆ. ಆದರೆ ಹತ್ಯೆಗೆ ಬೆಂಬಲಿಸಿದವರು ಆರಾಮ ಕೋಣೆಯಲ್ಲಿ ಬದುಕುತ್ತಿರುತ್ತಾರೆ. ಆದ್ದರಿಂದ ಯುವ ಸಮೂಹ ಇಂತಹ ಕುತಂತ್ರಗಳಿಗೆ ಬಲಿಯಾಗಬಾರದು. ಸಹನೆ ವಹಿಸಬೇಕು, ಅವಿವೇಕದ ವರ್ತನೆ ಸಲ್ಲದು ಎಂದು ಅವರು ಕರೆ ನೀಡಿದರು. ಅಲ್ಲದೆ ಹತ್ಯೆಗೀಡಾದ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.












