ಸನ್ಮಾರ್ಗ ವಾರ್ತೆ
ಮುಂಬೈ: ಶಾಲೆಯಲ್ಲಿ ನಡೆದ ವನಮಹೋತ್ಸವದಲ್ಲಿ ಋತುಮತಿಯರಾದ ವಿದ್ಯಾರ್ಥಿನಿಯರಿಗೆ ಗಿಡಗಳನ್ನು ನೆಡದಂತೆ ಅಧ್ಯಾಪಕರೊಬ್ಬರು ತಡೆದ ಘಟನೆ ಮಹಾರಾಷ್ಟ್ರದ ನಾಸಿಕ್ನಲ್ಲಿ ನಡೆದಿದೆ. ನಾಸಿಕ್ನ್ ತ್ರಿಂಬೆಕೇಶ್ವರದ ದೆವ್ಗವಾನ್ ಟ್ರೈಬಲ್ ಸ್ಕೂಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಋತುಮತಿಯರಾದ ವಿದ್ಯಾರ್ಥಿನಿಯರನ್ನು ಅಧ್ಯಾಪಕ ಗಿಡ ನೆಡೆದಂತೆ ದೂರವಿರಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ.
ಇಂತಹ ವಿದ್ಯಾರ್ಥಿನಿಯರು ಗಿಡ ನೆಟ್ಟರೆ ಅವುಗಳು ಮರಗಳಾಗಿ ಬೆಳೆಯುವುದಿಲ್ಲ ಎಂದು ಅಧ್ಯಾಪಕ ಹೇಳಿದರೆಂದು ವಿದ್ಯಾರ್ಥಿಗಳು ತಿಳಿಸಿದರು. ಕಳೆದ ವರ್ಷ ವಿದ್ಯಾರ್ಥಿನಿಯರು ನೆಟ್ಟ ಗಿಡಗಳು ಬೆಳೆದಿಲ್ಲ ಎಂದು ಅಧ್ಯಾಪಕ ತಿಳಿಸಿದ್ದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ನೆಟ್ಟ ಗಿಡಗಳ ಸಮೀಪ ಸುಳಿಯಲು ಕೂಡ ಬಿಡದ ಕುರಿತು ವಿದ್ಯಾರ್ಥಿಗಳು ಹೆತ್ತವರಿಗೆ ತಿಳಿಸಿದ್ದರು. ನಂತರ ಟ್ರೈಬಲ್ ಡೆವಲಪ್ಮೆಂಟ್ ಡಿಪಾರ್ಟಮೆಂಟಿಗೆ ದೂರು ನೀಡಿದರು. ತಮ್ಮನ್ನು ಅಪಮಾನಿಸಿದ್ದು ಈ ಅಧ್ಯಾಪಕನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ದೂರು ನೀಡಿದ ಬಾಲಕಿಯ ಕ್ಲಾಸಿನಲ್ಲಿರುವ ಎಲ್ಲ ವಿದ್ಯಾರ್ಥಿಗಳ ಹೇಳಿಕೆ ದಾಖಲಿಸಿಕೊಳ್ಳುತ್ತೇವೆ ಎಂದು ಶಾಲಾ ಪ್ರಾಧ್ಯಾಪಕರು ಹೇಳಿದ್ದು ಇತರ ಸಿಬ್ಬಂದಿ ಮುಂತಾದವರ ಹೇಳಿಕೆ ಪಡೆಯಲಾಗುವುದು ಎಂದು ಆದಿವಾಸಿ ವಿಕಸನ ಇಲಾಖೆ ಆಯುಕ್ತ ಸಂದೀಪ್ ಗೊಲಾಯಿತ ತಿಳಿಸಿದರು. ನಾಸಿಕ್ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಶಾಲೆಗೆ ತೆರಳಿ ವಿದ್ಯಾರ್ಥಿನಿಯರಿಂದ ಹೇಳಿಕೆ ಪಡೆದುಕೊಂಡಿದ್ದಾರೆ.












