ದಾಳಿಯ ಬಳಿಕ ವೆಂಟಿಲೇಟರ್‌ ನಲ್ಲಿರುವ ಲೇಖಕ ಸಲ್ಮಾನ್ ರಶ್ದಿ: ದುಷ್ಕರ್ಮಿಯ ಗುರುತು ಪತ್ತೆ

0
337

ಸನ್ಮಾರ್ಗ ವಾರ್ತೆ

ಅಮೆರಿಕ: ಇಲ್ಲಿ  ನ್ಯೂಯಾರ್ಕ್‌ನಲ್ಲಿ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ದುಷ್ಕರ್ಮಿಯೋರ್ವನಿಂದ ಚಾಕುವಿನಿಂದ ಇರಿತಕ್ಕೊಳಗಾಗಿರುವ ಭಾರತೀಯ ಮೂಲದ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರು ಕಣ್ಣು ಕಳೆದುಕೊಳ್ಳಬಹುದು ಎಂದು ವರದಿಯಾಗಿದೆ.

ಸಲ್ಮಾನ್ ರಶ್ದಿ ಅವರ ತೋಳಿನಲ್ಲಿ ನರಗಳು ತುಂಡಾಗಿವೆ ಮತ್ತು ಅವರ ಯಕೃತ್ತಿಗೆ ಹಾನಿಯಾಗಿದೆ ಮತ್ತು ಕಣ್ಣನ್ನು ಕಳೆದುಕೊಳ್ಳಬಹುದು ಎಂದು ಲೇಖಕರ ಪ್ರತಿನಿಧಿ ಆಂಡ್ರ್ಯೂ ವೈಲಿ ತಿಳಿಸಿರುವುದಾಗಿ ‘ಎನ್‌ಡಿಟಿವಿ’ ವರದಿ ಮಾಡಿದೆ.

“ಸುದ್ದಿ ಉತ್ತಮವಾಗಿಲ್ಲ,. ಸಲ್ಮಾನ್ ರಶ್ದಿ ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ತೋಳಿನ ನರಗಳು ಕತ್ತರಿಸಲ್ಪಟ್ಟಿದೆ. ಚಾಕುವಿನ ಏಟಿಗೆ ಯಕೃತ್ತು ಹಾನಿಗೊಳಗಾಗಿದೆ.” ಎಂದು ಆಂಡ್ರ್ಯೂ ವೈಲಿ ತಮ್ಮ ಈ ಮೇಲ್‌ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನ್ಯೂಯಾರ್ಕ್ ಪೊಲೀಸರು ದಾಳಿಕೋರನನ್ನು ನ್ಯೂಜೆರ್ಸಿಯ ಹದಿ ಮತರ್ (24) ಎಂದು ಗುರುತಿಸಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದಿಲ್ಲ. ಆತನ ವಿಚಾರಣೆಯ ಬಿಳಿಕ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತರ್ ಅವರ ಸೋಷಿಯಲ್ ಮೀಡಿಯಾ ಖಾತೆಯನ್ನು ಪರಿಶೀಲಿಸಿರುವ ಪೊಲೀಸರು, “ಶಿಯಾ ಉಗ್ರವಾದ” ಮತ್ತು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ (IRGC) ಯ ಬಗ್ಗೆ ಸಹಾನುಭೂತಿ ಹೊಂದಿದ್ದಾರೆಂದು ತೋರಿಸಿರುವುದಾಗಿ ಹೇಳಿದ್ದಾರೆ.

ರಶ್ದಿಯವರ ಮೇಲೆ ಹಾದಿ ಮಾತರ್ ವೇದಿಕೆಗೆ ಧಾವಿಸಿ ಅವರ ಮೇಲೆ ದಾಳಿ ಮಾಡಿದ ವೇಳೆ, ಸಂದರ್ಶಕ ಹೆನ್ರಿ ರೀಸ್ ಅವರ ತಲೆಗೂ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಇಂದು ನಮ್ಮಲ್ಲಿ ಅನೇಕರು ಕಂಡದ್ದು ದ್ವೇಷದ ಹಿಂಸಾತ್ಮಕ ಅಭಿವ್ಯಕ್ತಿಯಾಗಿದ್ದು ಅದು ನಮ್ಮನ್ನು ನಮ್ಮ ಅಂತರಂಗವನ್ನು ಬೆಚ್ಚಿಬೀಳಿಸಿದೆ” ಎಂದು ಕಾರ್ಯಕ್ರಮದ ಸಂಘಟಕರಾದ ಚೌಟಕ್ವಾ ಸಂಸ್ಥೆಯು ದಾಳಿಯ ನಂತರ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.

ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ದಾಳಿಯನ್ನು ‘ಭಯಾನಕ’ ಮತ್ತು ‘ಖಂಡನೀಯ’ ಎಂದು ತಿಳಿಸಿದ್ದು, “ಬೈಡನ್-ಹ್ಯಾರಿಸ್ ಆಡಳಿತದಲ್ಲಿರುವ ನಾವೆಲ್ಲರೂ ಅವರ ಶೀಘ್ರ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತಿದ್ದೇವೆ.” ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.