ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ದೇಶದ ಇತಿಹಾಸದಲ್ಲಿ ಮೊದಲ ಬಾರಿ ಮನೆಗಳಲ್ಲಿ ಆಗಸ್ಟ್ 13ರಿಂದ 15ರವರೆಗೆ ರಾಷ್ಟ್ರೀಯ ಧ್ವಜ ಹಾರಿಸಲು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ ಹಿನ್ನೆಲೆಯಲ್ಲಿ ತ್ರಿವರ್ಣ ಧ್ವಜಗಳು ಭಾರೀ ಮಾರಾಟವಾಗಿದೆ. ಈ ನಡುವೆ ಅಂಚೆ ಇಲಾಖೆಯು ನೇರ ಮತ್ತು ಆನ್ಲೈನ್ ಮೂಲಕ ಒಂದು ಕೋಟಿಗೂ ಹೆಚ್ಚು ಧ್ವಜಗಳನ್ನು ಮಾರಾಟ ಮಾಡಿರುವುದಾಗಿ ವರದಿಯಾಗಿದೆ.
ದೇಶದಲ್ಲಿ ಒಂದೂವರೆ ಲಕ್ಷ ಅಂಚೆ ಕಚೇರಿಗಳಿವೆ. ಇವುಗಳಲ್ಲಿ 25 ರೂಪಾಯಿಯಂತೆ 10 ದಿನಗಳಲ್ಲಿ ಒಂದು ಕೋಟಿ ತ್ರಿವರ್ಣ ಧ್ವಜಗಳನ್ನು ಮಾರಾಟ ಮಾಡಲಾಗಿದೆ ಎಂದು ಅಂಚೆ ಇಲಾಖೆಯು ಮಾಹಿತಿ ನೀಡಿದೆ. ಕಳೆದ ಹತ್ತು ದಿನಗಳಲ್ಲಿ ಒಂದು ಕೋಟಿ ತ್ರಿವರ್ಣ ಧ್ವಜಗಳನ್ನು ಮಾರಾಟ ಮಾಡಲಾಗಿದೆ. ಆಗಸ್ಟ್ 1 ರಿಂದ ಈ-ಪೋಸ್ಟ್ ಪೋರ್ಟಲ್ ಮೂಲಕ ರಾಷ್ಟ್ರಧ್ವಜ ಮಾರಾಟ ಆರಂಭವಾಗಿತ್ತು. ಆನ್ಲೈನ್ ಆರ್ಡರ್ ಕೊಡುವವರಿಗೆ ಉಚಿತವಾಗಿ ಮನೆಗಳಿಗೆ ಧ್ವಜವನ್ನು ತಲುಪಿಸಿ ಕೊಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.












