ಮಂಗಳೂರು, ಗೋವಾ ವಿವಿ ವಿಶ್ರಾಂತ ಕುಲಪತಿ, ಹಿರಿಯ ಇತಿಹಾಸ ತಜ್ಞ ಪ್ರೊ. ಬಿ. ಷೇಕ್ ಅಲಿ ನಿಧನ

0
527

ಸನ್ಮಾರ್ಗ ವಾರ್ತೆ

ಮೈಸೂರು: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಗೋವಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ, ಹಿರಿಯ ಇತಿಹಾಸ ತಜ್ಞ ಪ್ರೊ.ಬಿ. ಷೇಕ್ ಅಲಿ (98) ಗುರುವಾರ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರಿಂದು ಕೊನೆಯುಸಿರೆಳೆದಿದ್ದಾರೆ. ಮೃತರು ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪ್ರೊ. ಬಿ. ಷೇಕ್ ಅಲಿಯವರು ಹಾಸನ ಜಿಲ್ಲೆಯ ಬೆಳಗೋಡು ಗ್ರಾಮದವರು. ಮೈಸೂರು ವಿ.ವಿ.ಯಿಂದ ಆನರ್ಸ್ ಪದವಿ ಹಾಗೂ ಆಲಿಘರ್ ಮುಸ್ಲಿಂ ವಿ.ವಿ ಯಿಂದ ಪಿಎಚ್‌ಡಿ ಪಡೆದಿದ್ದರು. ಮೈಸೂರು ವಿ.ವಿ.ಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಉರ್ದು, ಇಂಗ್ಲಿಷ್, ಫ್ರೆಂಚ್ ಭಾಷೆ ಬಲ್ಲವರಾಗಿದ್ದ ಪ್ರೊ. ಷೇಕ್ ಅಲಿ ಅವರು ಸಾಲಾರ್ ಉರ್ದು ದಿನಪತ್ರಿಕೆ ಹಾಗೂ ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ, ನೂರ್-ಎ ಬಸೀರತ್ ಉರ್ದು ಮಾಸಿಕದ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಕನ್ನಡ ವಿ.ವಿ.ಪ್ರಕಟಿಸಿರುವ “ಕರ್ನಾಟಕ ಇತಿಹಾಸದ ಏಳು ಸಂಪುಟಗಳು’ ಕೃತಿಯ ಪ್ರಧಾನ ಸಂಪಾದಕರಾಗಿದ್ದರು. ‘ಟಿಪ್ಪು ಸುಲ್ತಾನ್’ ಇವರ ಪ್ರಮುಖ ಕೃತಿಗಳಲ್ಲೊಂದು.

ಇವರಿಗೆ ಮುಸ್ಲಿಮ್ ಲೇಖಕರ ಸಂಘದಿಂದ ನೀಡಲಾಗುವ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’,  ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.