ಕಸದ ತೊಟ್ಟಿಯಲ್ಲಿ ಎಸೆದು ಹೋದ ಹೆಣ್ಣು ಮಗುವಿನ ಸಂರಕ್ಷಣಾ ಜವಾಬ್ದಾರಿ ಹೊತ್ತ ಪೊಲೀಸರು: ‘ಎಂಎಚ್‌ಬಿ ಕೀ ಬೇಟಿ ‘ ಎಂದು ನಾಮಕರಣ!

0
394

ಸನ್ಮಾರ್ಗ ವಾರ್ತೆ

ಮುಂಬಯಿ: ಕಸದ ತೊಟ್ಟಿಯ ಬಳಿ ತೊರೆದು ಹೋದ ನವಜಾತ ಹೆಣ್ಣು ಶಿಶುವಿನ ರಕ್ಷಣೆಯ ಹೊಣೆಯನ್ನು ಮುಂಬೈ ಪೊಲೀಸರು ವಹಿಸಿಕೊಂಡಿದ್ದು ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ‌. ‘ಎಂಎಚ್‍ಬಿ’ ಕಾಲನಿ ಪೊಲೀಸ್ ಠಾಣೆಯ ಪೊಲೀಸರು ಈ ಹೃದಯವಂತಿಕೆಯನ್ನು ಮೆರೆದಿದ್ದಾರೆ.

ಸೆಪ್ಟಂಬರ್ 5ರಂದು ಶಿವಾಜಿ ನಗರದ ಅಟೊ ರಿಕ್ಷಾ ಸ್ಟಾಂಡ್ ಸಮೀಪದ ಕಸದ ತೊಟ್ಟಿಯ ಬಳಿ ಯಾರೋ ನವಜಾತ ಹೆಣ್ಣು ಮಗುವನ್ನು ಎಸೆದು ಹೋಗಿದ್ದರು. ಸಮೀಪದ ಬೇಕರಿ ಮಾಲಕನಿಗೆ ಮಗುವಿನ ಅಳು ಕೇಳಿಸಿದ್ದು ಎಂಎಚ್‍ಬಿ ಪೊಲೀಸರಿಗೆ ಕರೆಮಾಡಿ ಮಾಹಿತಿ ನೀಡಿದ್ದರು. ಪೊಲೀಸರು ಬಂದು ನೋಡುವಾಗ ಬಿಳಿ ಬಟ್ಟೆಯೊಂದರಲ್ಲಿ ಸುತ್ತಿ ಮಗುವನ್ನು ಯಾರೋ ಎಸೆದು ಹೋಗಿದ್ದರು.

ತಕ್ಷಣ ಪೊಲೀಸರು ಮಗುವನ್ನು ಸಮೀಪದ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿದರು. ಮಗು ಆರೋಗ್ಯದಿಂದಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಮಗುವಿನ ರಕ್ಷಣೆಯ ಹೊಣೆಯನ್ನು ಎಂಎಚ್‍ಬಿ ಪೊಲೀಸರೇ ವಹಿಸಿಕೊಂಡಿದ್ದಾರೆ. ಈಗ ಈ ಹೆಣ್ಣುಮಗುವಿನ ಭವಿಷ್ಯ ಉಜ್ವಲಗೊಳಿಸುವ ತರಾತುರಿಯಲ್ಲಿ ಅವರು ತೊಡಗಿದ್ದಾರೆ.

ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಸೂರ್ಯಕಾಂತ್ ಪವಾರ್ ಮಗುವಿನ ಶೈಕ್ಷಣಿಕ ವೆಚ್ಚವನ್ನು ಭರಿಸಲು ಮುಂದೆ ಬಂದಿದ್ದಾರೆ. ಮಗುವಿನ ಸುರಕ್ಷಿತ ಭವಿಷ್ಯವನ್ನು ಖಾತರಿ ಪಡಿಸುವುದಕ್ಕೋಸ್ಕರ ಇತರರಿಂದಲೂ ಪೊಲೀಸರು ಹಣ ಸಂಗ್ರಹಿಸುತ್ತಿದ್ದಾರೆ. ಭವಿಷ್ಯದಲ್ಲಿ ಈ ಮಗು ಕಷ್ಟಪಡುವಂತಾಗಬಾರದು ಎಂದು ಪೊಲೀಸರು ಹೇಳಿದ್ದಾರೆ.

ನಾವು ‘ಎಂಎಚ್‍ಬಿ ಕಿ ಬೇಟಿ’ ಎಂದು ನಾಮಕರಣ ಮಾಡಿದ್ದೇವೆ. ಅವಳು ಈಗ ನಮ್ಮ ಕುಟುಂಬ. ಅವಳಿಗೆ ತಾಯಿಯ ಆರೈಕೆ ಅಗತ್ಯವಾಗ ಅತ್ಯಂತ ಅನಿವಾರ್ಯ ಕಾಲವಿದು. ಅವಳನ್ನು ದತ್ತು ಸ್ವೀಕರಿಸಬೇಕೆಂದು ಕಮ್ಯುನಿಟಿ ಗ್ರೂಪ್‍ನಲ್ಲಿ ಸಂದೇಶ ಹಾಕಿದ್ದೇವೆ. ಎಂದು ಎಂಎಚ್‍ಬಿ ಠಾಣೆಯ ಉನ್ನತ ಪೊಲೀಸಧಿಕಾರಿ ಹೇಳಿದರು.

ಇದೇ ವೇಳೆ ತಂದೆ-ತಾಯಿಯ ವಿರುದ್ಧ ಮಗುವನ್ನು ತೊರೆದಿರುವುದಕ್ಕೆ ಭಾರತ ದಂಡ ಸಂಹಿತೆ 317 ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಂದೆ-ತಾಯಿಯರನ್ನು ಹುಡುಕಲು ಸಿಸಿಟಿವಿ ಅನ್ವೇಷಣೆ ನಡೆಸಲಾಗಿದೆ ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ‌.