ಪೋಷಕರೇ, ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಿ: ಪೊಸಕುರಲ್ ಟಿವಿ ಚಾನೆಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಕರೆ; ಸನ್ಮಾರ್ಗ ಕ್ವಿಝ್ ಸ್ಪರ್ಧೆ ವಿಜೇತ ಹಿದಾಯತುಲ್ಲಾ ರಿಗೆ ಸನ್ಮಾನ 

0
804

ಮಂಗಳೂರು: ಸನ್ಮಾರ್ಗ ಪತ್ರಿಕೆ ನಡೆಸಿದ ಸೀರತ್ ಕ್ವಿಝ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಧ್ಯಾಪಕ ಹಿದಾಯತುಲ್ಲಾ ಅವರಿಗೆ ಜಮಾಅತೆ ಇಸ್ಲಾಮಿ ಹಿಂದ್ ದೇರಳಕಟ್ಟೆ ವರ್ತುಲದ ಆಶ್ರಯದಲ್ಲಿ ಏರ್ಪಡಿಸಲಾದ ಸನ್ಮಾನ ಕಾರ್ಯಕ್ರಮವು ದೇರಳಕಟ್ಟೆ ಚಿಂತನಾ ಗ್ರಂಥಾಲಯದಲ್ಲಿ ಇತ್ತೀಚೆಗೆ ನಡೆಯಿತು. ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿಯವರು ಹಿದಾಯತುಲ್ಲಾರನ್ನು ಸನ್ಮಾನಿಸಿದರು.

ಓದುವ ಅಭ್ಯಾಸವನ್ನು ಬೆಳೆಸಬೇಕು ಎನ್ನುವ ಸದುದ್ದೇಶದಿಂದ ನಡೆಸಿದ ಕ್ವಿಝ್ ಸ್ಪರ್ಧೆಯಲ್ಲಿ ಅಧ್ಯಾಪಕರೋರ್ವರು ಗೆದ್ದದ್ದು ನಿಜವಾಗಿಯೂ ಅಭಿನಂದನಾರ್ಹ ವಿಷಯ. ಓದುವ ಅಭ್ಯಾಸ ಬೆಳೆಸಲು ಮಕ್ಕಳಿಗೆ ಅವರು ಮಾದರಿಯಾಗಿದ್ದಾರೆ. ಇಂತಹ ಕ್ವಿಜ್ ಸ್ಪರ್ಧೆಯನ್ನು ನಡೆಸಿದ ಸನ್ಮಾರ್ಗ ಪತ್ರಿಕೆಗೂ, ಗೆದ್ದ ಅಧ್ಯಾಪಕರಿಗೂ ಸನ್ಮಾನಿಸಿದ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಗೂ, ಅದೇ ರೀತಿ  ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದ ಹಿದಾಯತುಲ್ಲಾ ಮಾಸ್ಟರ್ ಅವರಿಗೂ ಅಭಿನಂದನೆಗಳು ಎಂದ ವಿದ್ಯಾಧರ್ ಶೆಟ್ಟಿ ಅವರು, ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಸಲಿಕ್ಕಾಗಿ ಮನೆಯವರು ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿದಾಯತುಲ್ಲಾ ಅವರು, ಸನ್ಮಾರ್ಗ ಪತ್ರಿಕೆ ಈ ಹಿಂದೆ ನಡೆಸಿದ ಸ್ಪರ್ಧೆಯಲ್ಲೂ ನಾನು ಭಾಗವಹಿಸಿದ್ದೇನೆ. ಕೆಲವೊಂದು ಸ್ಪರ್ಧೆಯಲ್ಲಿ ಬಹುಮಾನ ಸಿಕ್ಕಿದೆ. ಈ ಬಾರಿ ಮೊದಲ ಬಹುಮಾನ ಸಿಕ್ಕಿದ ಕಾರಣ ಸಂತೋಷವಾಗಿದೆ ಎಂದರು.

ಒಳ್ಳೆಯ ಉದ್ದೇಶದಿಂದ ಸನ್ಮಾರ್ಗ ವಾರಪತ್ರಿಕೆಯು ನಡೆಸಿದ ಕ್ವಿಝ್ ಕಾರ್ಯಕ್ರಮದಲ್ಲಿ ಗೆದ್ದ ಹಿದಾಯತುಲ್ಲಾರಿಗೆ ಅಭಿನಂದನೆ, ಎಲ್ಲರಿಗೂ  ಒಳ್ಳೆಯದಾಗಲಿ ಎಂದು ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ  ಹಾಜಿ ಅಬೂಬಕರ್ ಶುಭ ಹಾರೈಸಿದರು. ಸನ್ಮಾರ್ಗ ಸಂಪಾದಕ ಏ ಕೆ ಕುಕ್ಕಿಲ ಸಂದರ್ಭಯೋಚಿತವಾಗಿ ಮಾತಾಡಿದರು.

ನಝರ್ ದೇರಳಕಟ್ಟೆ ಕುರ್‌ಆನ್ ಪಠಿಸಿದರು. ಎಸ್ಐಒ ಉಳ್ಳಾಲ ಘಟಕಾಧ್ಯಕ್ಷ ನಿಜಾಮ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಘಟಕದ ಅಧ್ಯಕ್ಷ ಅಬ್ದುಲ್ ಕರೀಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಘಟಕದ ಉಪಾಧ್ಯಕ್ಷ ಅಬ್ದುಲ್ ರಹೀಂ, ದೇರಳಕಟ್ಟೆ ವಲಯ ಸಂಚಾಲಕ ಡಾ ಅಬೂಸಾಲಿಹ್ ಮೊದಲಾದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.