ಕರಾಚಿ: ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದ್ದು ಇಬ್ಬರ ಮೃತಹದೇಹವನ್ನು ಹೊರ ತೆಗೆಯಲಾಗಿದೆ. ಇಂದು ಬೆಳಗ್ಗೆ 7:30ಕ್ಕೆ ಕರಾಚಿಯ ಮಲಿರ್ನ ಜಾಫರ್ ತಯ್ಯಾರ್ ಸೊಸೈಟಿಯಲ್ಲಿ ಘಟನೆ ನಡೆದಿದೆ. ಸುಮಾರು 35ರಿಂದ 40 ಮಂದಿ ಕಟ್ಟಡದ ಅವಶೇಷದೊಳಗಾಗಿದೆ.
8:30ರ ಹೊತ್ತಿಗೆ ಕಟ್ಟಡದ ಅವಶೇಷಗಳಡಿಯಿಂದ ಇಬ್ಬರನ್ನು ರಕ್ಷಿಸಲಾಯಿತು. ರಕ್ಷಣಾ ತಂಡಗಳು ಜನರನ್ನು ರಕ್ಷಿಸಲು ಕಾರ್ಯ ನಿರತವಾಗಿದ್ದು ಕಟ್ಟಡದ ಸುತ್ತಮುತ್ತಲಿನ ಹಾದಿಗಳು ಇಕ್ಕಟ್ಟಾದ್ದರಿಂದ ಬೃಹತ್ ಯಂತ್ರಗಳನ್ನು ಕುಸಿದ ಕಟ್ಟಡದ ಸಮೀಪಕ್ಕೆ ತರಲು ಸಾಧ್ಯವಾಗಿಲ್ಲ. ಇದು ರಕ್ಷಣಾ ಕಾರ್ಯಕ್ಕೆ ಅಡಚಣೆಯಾಗಿದ್ದು ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳೀಯರು ಸೇರಿ ಕಟ್ಟಡದ ಅವಶೇಷಗಳಡಿಯಿಂದ ಜನರನ್ನು ತೆರವುಗೊಳಿಸುವ ಶ್ರಮ ನಡೆಸುತ್ತಿದ್ದಾರೆ.
ಹತ್ತು ಗಂಟೆಗೆ ಜೆಸಿಬಿಯೊಂದನ್ನು ಕಷ್ಟಪಟ್ಟು ಕಟ್ಟಡೆದೆಡೆಗೆ ತರಲಾಯಿತು. ಅದು ಅವಶೇಷಗಳನ್ನು ತೆರವು ಕಾರ್ಯ ನಡೆಸುತ್ತಿದೆ. ಅವಶೇಷಗಳಡಿಯಲ್ಲಿ ಮಕ್ಕಳ ಅಳು ಕೇಳಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದರು.
ಕರಾಚಿಯ ಪೊಲೀಸ್ ಕಮಿಶನರ್ ಇಫ್ತಿಕಾರ್ ಶಲ್ವಾನಿ ಸ್ಥಳಕ್ಕಾಗಮಿಸಿದರು. ಜನರ ರಕ್ಷಣೆಯ ಕಾರ್ಯ ತ್ವರಿತವಾಗಿ ಮುಂದುವರಿದಿದೆ ಎಂದು ಅವರು ತಿಳಿಸಿದರು. ಪಾರು ಮಾಡಲಾದ ಮೂವರನ್ನು ಜಿನ್ನಾ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಸೆಂಟರ್ಗೆ ದಾಖಲಿಸಲಾಗಿದ್ದು ಕುಸಿದ ಕಟ್ಟಡದಲ್ಲಿ ನಾಲ್ಕು ಕುಟುಂಬಗಳು ವಾಸಿಸುತ್ತಿದ್ದವು ಎಂದು ವರದಿ ತಿಳಿಸಿದೆ.












