ಇಸ್ಲಾಮಾಬಾದ್: ಪಾಕಿಸ್ತಾನದ ಮುಸ್ಲಿಂ ಲೀಗ್ ನಾಯಕಿ ಮರ್ಯಮ್ ನವಾಝ್ ಶರೀಫ್ ತನ್ನ ತಂದೆಯ ಭವಿಷ್ಯ ದೇವನ ಕೈಯಲ್ಲಿದೆ ಎಂದು ಹೇಳಿದ್ದಾರೆ. ಇಸ್ಲಾಮಾಬಾದಿನ ಹೈಕೋರ್ಟು ಸೋಮವಾರ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ರಿಗೆ ಅಲ್ ಅಝೀಝಿಯ ಸ್ಟೀಲ್ ಮಿಲ್ಸ್ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ್ದು ನಂತರ ಅವರ ಪುತ್ರಿ ಮರಿಯಂ ನವಾಝ್ ಪ್ರತಿಕ್ರಿಯೆ ನೀಡಿದರು. ನಾನು ದೇವನಲ್ಲಿ ತಂದೆಯ ಭವಿಷ್ಯಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ. ಅವರ ಭವಿಷ್ಯವನ್ನು ದೇವನು ಮಾತ್ರ ತೀರ್ಮಾನಿಸಲು ಸಾಧ್ಯ ಎಂದು ಮರಿಯಂ ಹೇಳಿದರು.
ಜಸ್ಟಿಸ್ ಆಮಿರ್ ಫಾರೂಕ್ ಮತ್ತು ಜಸ್ಟಿಸ್ ಮೊಹ್ಸಿನ್ ಅಕ್ತರ್ ರವರ ಇಬ್ಬರು ಸದಸ್ಯರ ಇಸ್ಲಾಮಾಬಾದ್ ಹೈಕೋರ್ಟು ಪೀಠ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿಡಲು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿತ್ತು. ಅಲ್ ಅಝೀಝಿಯ ಹಗರಣದಲ್ಲಿ ಕಳೆದ ವರ್ಷ ಡಿಸೆಂಬರ್ 24ರಂದು ನವಾಝ್ ಶರೀಫ್ರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದರ ವಿರುದ್ಧ ಅವರು ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದು ಶಿಕ್ಷೆಯನ್ನು ಅಮಾನತಿನಲ್ಲಿಡಬೇಕೆಂದು ಆಗ್ರಹಿಸಿದ್ದರು.












