ಸನ್ಮಾರ್ಗ ವಾರ್ತೆ
ಸಹರಾನ್ಪುರ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ನಡೆಸಿದ ಮದರಸಗಳ ಸಮೀಕ್ಷೆಯ ನಂತರ ಸಲ್ಲಿಸಲಾದ ವರದಿಯಲ್ಲಿ ದಾರುಲ್ ಉಲೂಮ್ ದೇವಬಂದ್-ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯನ್ನು ಅಕ್ರಮ, ಮಾನ್ಯತೆ ಪಡೆಯದ ಮದರಸ ಎಂದು ಸಹರಾನ್ಪುರ ಜಿಲ್ಲೆಯ ಅಧಿಕಾರಿಗಳು ಭಾನುವಾರ ಘೋಷಿಸಿದ್ದಾರೆ.
ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಭರತ್ ಲಾಲ್ ಗೊಂಡ್ ಮಾತನಾಡಿ, ಸಹರಾನ್ಪುರದಲ್ಲಿ 306 ಅಕ್ರಮ ಮದರಸಾಗಳನ್ನು ಪತ್ತೆ ಹಚ್ಚಲಾಗಿರುವ ಬಗ್ಗೆ ತಿಳಿಸಿದ್ದಾರೆ. ಇವುಗಳಲ್ಲಿ ದಾರುಲ್ ಉಲೂಮ್ ದೇವಬಂದ್ ಕೂಡ ಅಕ್ರಮ ಮದರಸಾವಾಗಿದ್ದು, ವಿದ್ಯಾರ್ಥಿವೇತನ ಮತ್ತು ಇತರ ಸರಕಾರಿ ಸೌಲಭ್ಯಗಳಿಂದ ವಂಚಿತವಾಗಲಿದೆ. ಮದರಸಾ ಸ್ಥಾಪನೆಯಾದ ವರ್ಷದಲ್ಲಿ, ಅದನ್ನು ನಡೆಸುತ್ತಿದ್ದ ಸಮುದಾಯ, ಮದರಸಾದ ಹೆಸರು ಮತ್ತು ಅದರ ಆದಾಯದ ಮೂಲಗಳಂತಹ ಆಡಳಿತವು ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ ಅದನ್ನು ಪರಿಶೀಲಿಸಲನೆ ನಡೆಸಲಾಗಿದೆ ಎಂದು ಗೊಂಡ್ ಹೇಳಿದ್ದಾರೆ.
ವರದಿಯಂತೆ ಜಿಲ್ಲಾಡಳಿತದಲ್ಲಿ ನೋಂದಣಿಯಾಗಿರುವ 754 ಮದರಸಾಗಳಿದ್ದು, ಅದರಲ್ಲಿ 664 ಮದರಸಗಳು 5ನೇ ತರಗತಿವರೆಗೆ, 80 ಮದರಸಗಳು 8ನೇ ತರಗತಿವರೆಗೆ, ಉಳಿದ 10ಮದರಸಗಳು 10ನೇ ತರಗತಿವರೆಗಿನ ಶಿಕ್ಷಣ ನೀಡುತ್ತಿವೆ.
ಇಸ್ಲಾಮಿಕ್ ಶೈಕ್ಷಣಿಕ ಕೇಂದ್ರಗಳ ಕುರಿತು ಸಮೀಕ್ಷೆಯನ್ನು ಉತ್ತರ ಪ್ರದೇಶ ಸರ್ಕಾರವು ಕಳೆದ ತಿಂಗಳು ಪ್ರಾರಂಭಿಸಿತ್ತು. ಮಾನ್ಯತೆ ಇಲ್ಲದ ಮದರಸಾಗಳಲ್ಲಿರುವ ವಿದ್ಯಾರ್ಥಿಗಳು, ಶಿಕ್ಷಕರು, ಪಠ್ಯಕ್ರಮ ಮತ್ತು ಯಾವುದೇ ಸರ್ಕಾರೇತರ ಸಂಸ್ಥೆಗಳೊಂದಿಗಿನ ಸಂಬಂಧದ ಬಗ್ಗೆ ತಿಳಿಯಲು 12 ಅಂಶಗಳನ್ನು ಒಳಗೊಂಡ ಸಮೀಕ್ಷೆಯನ್ನು ನಡೆಸುವ ಘೋಷಣೆಯನ್ನು ಸರ್ಕಾರ ಮಾಡಿತ್ತು.
ದಾರುಲ್ ಉಲೂಮ್ ದೇವಬಂದ್ನ ಉಪಕುಲಪತಿ ಮುಫ್ತಿ ಅಬುಲ್ ಖಾಸಿಮ್ ನೊಮಾನಿಯವರು ತಮ್ಮ ಹೇಳಿಕೆಯಲ್ಲಿ, “ದಾರುಲ್ ಉಲೂಮ್ ದೇವಬಂದ್ ವಿಶ್ವವಿದ್ಯಾನಿಲಯವು ಇದುವರೆಗೆ ಸರ್ಕಾರದಿಂದ ಯಾವುದೇ ರೀತಿಯ ಸಹಾಯಧನ ಅಥವಾ ದೇಣಿಗೆಯನ್ನು ಸ್ವೀಕರಿಸಿಲ್ಲ” ಎಂದು ಹೇಳಿದ್ದಾರೆ.
“ಸಂಸ್ಥೆಯು ಜಿಲ್ಲಾಡಳಿತದ ಅಧೀನದಲ್ಲಿ ನೋಂದಾಯಿತವಾಗಿಲ್ಲವಾದರೂ ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ. “ದಾರುಲ್ ಉಲೂಮ್ ಶೂರಾ ಸೊಸೈಟಿಯು” ಸಂವಿಧಾನದ ‘ಸೊಸೈಟೀಸ್ ಆಕ್ಟ್’ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದೆ ಮತ್ತು ಸಂವಿಧಾನವು ಖಾತರಿ ಪಡಿಸುವ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.












