ಸನ್ಮಾರ್ಗ ವಾರ್ತೆ
ಆಗ್ರಾ: ತಾಜ್ಮಹಲ್ನ ಉದ್ಯಾನವನದಲ್ಲಿ ಪುರುಷನೊಬ್ಬ ಮಹಿಳೆಯೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿರುವ ವಿಷಯದ ಕುರಿತು ಪ್ರಸಾರವಾಗುತ್ತಿರುವ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಹೇಳಿದೆ. “ತಾಜ್ ಮಹಲ್ ಆವರಣ ಎಂದು ಹೇಳಲಾದ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ನಮಾಜ್ ಮಾಡುತ್ತಿದ್ದಾರೆ ಎಂದು ಹೇಳಲಾದ ವೀಡಿಯೊ ವೈರಲ್ ಆಗುತ್ತಿರುವುದನ್ನು ನಾವು ನೋಡಿದ್ದೇವೆ. ಆದರೆ, ವೀಡಿಯೊದ ಸತ್ಯಾಸತ್ಯತೆಯ ಬಗ್ಗೆ ಯಾವುದೇ ಖಚಿತತೆ ಇಲ್ಲ. ವಿಶೇಷವಾಗಿ ತಾಜ್ಮಹಲ್ ಪರಿಸದಲ್ಲಿ ನಮ್ಮ ಯಾವ ಸಿಬ್ಬಂದಿಯೂ ಹಾಗೆ ಯಾರೂ ಮಾಡಿದ್ದನ್ನು ನೋಡಿಲ್ಲ. ನಾನು ಭಾನುವಾರವೂ ತಾಜ್ಮಹಲ್ ಆವರಣದಲ್ಲಿದ್ದೆ. ಆದರೆ ಅಂತಹ ಯಾವುದೇ ಘಟನೆ ಕಂಡುಬಂದಿಲ್ಲ” ಎಂದು ಎಎಸ್ಐ ರಾಜ್ ಕುಮಾರ್ ಪಟೇಲ್, ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ, ಆಗ್ರಾ ಸರ್ಕಲ್ ಹೇಳಿದ್ದಾರೆ.
ತಾಜ್ ಪರಿಸರದಲ್ಲಿ ನಮಾಝ್ಗೆ ನಿಷೇಧ ಇದೆ. ಆದ್ದರಿಂದ ಈ ಬಗ್ಗೆ ನಾವು ತನಿಖೆ ಮಾಡುತ್ತೇವೆ. ತಾಜ್ಮಹಲ್ ಕಂಪೌಂಡಿನ ಮಸೀದಿ ಪರಿಸರದಲ್ಲಿ ಎಲ್ಲ ಶುಕ್ರವಾರ ನಮಾಝ್ ನಡೆಯುತ್ತದೆ. ಅದಕ್ಕೂ ಪಾಸ್ ಇದೆ. ತಾಜ್ಮಹಲ್ನ ಸುತ್ತಲಿನ ನಿವಾಸಿಗಳಿಗೆ ಮಾತ್ರ ಅನುಮತಿ ಇದೆ. ತಾಜ್ಮಹಲ್ ಪರಿಸರದಲ್ಲಿ ಇಂತಹ ಘಟನೆಗಳು ಆಗದಿರಲಿಕ್ಕಾಗಿ ಸಂದರ್ಶಕರು ಹೆಚ್ಚು ಬರುವ ದಿನಗಳಲ್ಲಿ ಸುರಕ್ಷೆಯ ತಪಾಸಣೆ ತೀವ್ರವಾಗಿ ನಡೆಸುತ್ತೇವೆ. ತಾಜ್ಮಹಲ್ ಅನ್ನು ತೇಜೊಮಹಲ್, ಶಿವಾಲಯ ಎನ್ನುತ್ತಿರುವ ತೀವ್ರ ಹಿಂದುತ್ವವಾದಿಗಳು ವೀಡಿಯೊ ನೋಡಿ ಭಾರೀ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂಬುದಾಗಿ ವರದಿಯಾಗಿದೆ.












