ಮಾತಾಪಿತರು ಸ್ವರ್ಗದ ಕೀಲಿಕೈ

0
351

ಖದೀಜ ನುಸ್ರತ್

ಮಾತಾಪಿತರು ಅಲ್ಲಾಹನು ನೀಡಿದ ಅತ್ಯಮೂಲ್ಯ ಕೊಡುಗೆಗಳಲ್ಲಿ ಒಂದಾಗಿದೆ. ಅವರು ಮಕ್ಕಳ ದೈಹಿಕ, ಮಾನಸಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ನಮ್ಮ ಜೀವನವನ್ನು ಅತ್ಯುನ್ನತ ರೀತಿಯಲ್ಲಿ ಮುನ್ನಡೆಸಲು ಮಾರ್ಗದರ್ಶಕರಾಗಿರುತ್ತಾರೆ. ಹೆತ್ತವರು ಮಕ್ಕಳಿಗೆ ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯನ್ನಿಡಲು ಹಾಗೂ ಭವಿಷ್ಯದಲ್ಲಿ ಬರುವ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಕಲಿಸುತ್ತಾರೆ. ಅವರು ನಿಷ್ಕಳಂಕವಾಗಿ ಮಕ್ಕಳ ಒಳಿತನ್ನು ಮಾತ್ರ ಬಯಸುತ್ತಾರೆ. ಮಕ್ಕಳು ಎಷ್ಟು ತಪ್ಪು ಮಾಡಿದರೂ ಎಲ್ಲವನ್ನೂ ಕ್ಷಮಿಸಿ ಬಿಡುತ್ತಾರೆ. ಮಕ್ಕಳಿಗೆ ಅಗತ್ಯ ಇರುವ ಎಲ್ಲವನ್ನೂ ಹೆತ್ತವರಿಗೆ ನೀಡಲು ಅಸಾಧ್ಯವಾದರೂ ತಮ್ಮ ಅಗತ್ಯ, ಆಸೆ, ಆಕಾಂಕ್ಷೆಗಳನ್ನು ಕಡೆಗಣಿಸಿ ತಮ್ಮಲ್ಲಿರುವ ಉತ್ತಮವಾದುದನ್ನೇ ನೀಡುತ್ತಾರೆ. ತಾವು ತಿನ್ನದ್ದನ್ನು ಮಕ್ಕಳಿಗೆ ತಿನ್ನಿಸುತ್ತಾರೆ, ತಾವು ಧರಿಸದ್ದನ್ನು ಮಕ್ಕಳಿಗೆ ಧರಿಸುತ್ತಾರೆ. ತಮ್ಮ ನಿದ್ರೆ, ಆರೋಗ್ಯವನ್ನು ಕಡೆಗಣಿಸಿ ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ.

ಪವಿತ್ರ ಕುರ್ ಆನ್ ನಲ್ಲಿ ಅಲ್ಲಾಹನ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ ಕೂಡಲೇ ಮಾತಾಪಿತರೊಂದಿಗೆ ಸದ್ವರ್ತನೆ ತೊರಲು ಆದೇಶಿಸಲಾಗಿದೆ. ಪವಿತ್ರ ಕುರ್ ಆನ್ ನಲ್ಲಿ ಬಳಸಲಾಗಿರುವ ಇಹ್ಸಾನ್ ಎಂಬ ಪದದ ವಿಶಾಲಾರ್ಥವೇನೆಂದರೆ ಅವರಿಂದ ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ತನು ಮನ ಧನದಿಂದ ಸೇವೆ ಮಾಡುವುದಾಗಿದೆ. ಹೆತ್ತವರ ದೀರ್ಘಾಯುಷ್ಯ ಮಕ್ಕಳ ಪಾಲಿಗೆ ಮಹಾ ಅನುಗ್ರಹವಾಗಿರುತ್ತದೆ. ಅವರು ನಿಮಗೆ ಮಾಡಿದಂತಹ ಉಪಕಾರಗಳನ್ನು ನೆನಪಿನಲ್ಲಿಡಿರಿ. ಇದರಿಂದ ಪ್ರೀತಿಯು ಹೆಚ್ಚುವುದು.

“ನನಗೆ ಕೃತಜ್ಞತೆ ಸಲ್ಲಿಸು ಮತ್ತು ನಿನ್ನ ಮಾತಾಪಿತರಿಗೆ ಕೃತಜ್ಞತೆ ಸಲ್ಲಿಸು.” (ಪವಿತ್ರ ಕುರ್ ಆನ್ 31:14)

ಮಾತಾಪಿತರ ಸೇವೆ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಬೇರೆ ಬೇರೆ ಕುಟುಂಬದಲ್ಲಿ ಬೇರೆ ಬೇರೆ ಸಮಯದಲ್ಲಿ ವಿಭಿನ್ನ ರೀತಿಯಾಗಿರುತ್ತದೆ. ಕೆಲವರ ಪಾಲಿಗೆ ಕಷ್ಟವೂ ಇನ್ನು ಕೆಲವರ ಪಾಲಿಗೆ ಅದು ಸುಲಭವೂ ಆಗಿರುತ್ತದೆ. ಕಷ್ಟವಾದಷ್ಟು ಅದಕ್ಕೆ ಸಿಗುವ ಪ್ರತಿಫಲವು ಹೆಚ್ಚಾಗಿರುತ್ತದೆ. ಅವರನ್ನು ಗೌರವಿಸಿರಿ, ಪ್ರೀತಿಸಿರಿ, ಅನುಸರಿಸಿರಿ ಮತ್ತು ಆಜ್ಞಾಪಾಲನೆ ಮಾಡಿರಿ. ಮಾತಾಪಿತರ ದೈನಂದಿನ ಖರ್ಚುವೆಚ್ಚಗಳನ್ನು ನೋಡಿಕೊಳ್ಳುವುದು ಒಂದು ರೀತಿಯ ಸೇವೆಯಾಗಿರುತ್ತದೆ. ಒಂದಿಷ್ಟು ಹಣ ಅವರ ಕೈಯಲ್ಲಿಟ್ಟು ಹಣ ಖರ್ಚು ಮಾಡುವ ವಿಷಯದಲ್ಲಿ ಅವರಿಗೂ ಸ್ವಾತಂತ್ರ್ಯವಿರುವಂತೆ ಅವಕಾಶ ಮಾಡಿಕೊಡಿ. ಎಲ್ಲದ್ದಕ್ಕೂ ಮಕ್ಕಳ ಮುಂದೆ ಕೈ ಚಾಚುವಂತಹ ಸಂದರ್ಭಗಳು ಬಾರದಂತೆ ಜಾಗರೂಕತೆ ವಹಿಸಿರಿ. ಅವರು ದುರ್ಬಲರಾದಾಗ ಅವರ ದೈಹಿಕ ಸೇವೆ ಮತ್ತು ಮಾನಸಿಕ ಸೇವೆಗಾಗಿ ಹೆಚ್ಚಿನ ಆದ್ಯತೆಯನ್ನು ನೀಡಿರಿ. ಹೆತ್ತವರು ಆರ್ಥಿಕವಾಗಿ ದುರ್ಬಲವಾಗಿರುವಾಗ ಅವರಿಗೆ ಸಹೋದರ ಸಹೋದರಿಯರ ವಿದ್ಯಾಭ್ಯಾಸ, ವಿವಾಹದಂತಹ ಜವಾಬ್ದಾರಿಯನ್ನು ನೆರವೇರಿಸಲು ಸಹಾಯ ಮಾಡುವುದು ಅತ್ಯುತ್ತಮ ಸೇವೆಯಾಗಿರುತ್ತದೆ. ಹೆಣ್ಣು ಮಕ್ಕಳಿಗೆ ವಿವಾಹ ಸಂದರ್ಭದಲ್ಲಿ ಮಾತಾಪಿತರು ಉಡುಗೊರೆಯಾಗಿ ನೀಡಿದ ಚಿನ್ನವನ್ನು ಅವರ ಕಷ್ಟ ಕಾಲದಲ್ಲಿ ಪುನಃ ಅವರಿಗೆ ನೀಡಿ ಸಹಕರಿಸುವುದು ಕೂಡಾ ಸೇವೆಯಾಗಿರುತ್ತದೆ. ಏಕೆಂದಂರೆ ಆಧುನಿಕ ಕಾಲದಲ್ಲಿ ವೃದ್ಧಾಪ್ಯ ಕಾಲದ ಚಿಕಿತ್ಸೆಗೆ ದೊಡ್ಡ ಮೊತ್ತ ಹಣ ಖರ್ಚಾಗುತ್ತದೆ. ಕೆಲವೊಮ್ಮೆ ನಿರುದ್ಯೋಗ ಮತ್ತು ರೋಗವು ಹಲವರನ್ನು ದಾರಿದ್ರ್ಯದೆಡೆಗೆ ತಳ್ಳುತ್ತದೆ. ಮಕ್ಕಳು ಜೀವಿಸಿರುವಾಗ ಹೆತ್ತವರು ಯಾರೊಂದಿಗೆಲ್ಲಾ ಕೈಚಾಚುವ ಅವಸ್ಥೆ ಬಾರದಂತೆ ಜಾಗರೂಕತೆ ವಹಿಸಬೇಕು.

ಮಾತಾಪಿತರಿಗೆ ವಿವಿಧ ಸಮಯ ಮತ್ತು ಸಂದರ್ಭಗಳಲ್ಲಿ ಏನಾದರೂ ಉಡುಗೊರೆ ನೀಡಿರಿ. ಆರೋಗ್ಯದ ಬಗ್ಗೆ ಯಾವಾಗಲು ವಿಚಾರಿಸುತ್ತಿರಿ ಮತ್ತು ರೋಗಿಯಾದಾಗ ಅವರ ಸಂದರ್ಶನ ಮತ್ತು ಶುಷ್ರೂಷೆ ಮಾಡಿರಿ. ವಿನೋಧ ಯಾತ್ರೆ ಹೋಗುವಾಗ ಕೆಲವೊಮ್ಮೆ ಅವರನ್ನೂ ಕರೆದುಕೊಂಡು ಹೋಗಿರಿ. ಸಂಬಂಧಿಕರ ಮನೆಗೆ ಹೊಗುವಾಗ ಅವರನ್ನು ಜೊತೆಯಾಗಿ ಕರೆದುಕೊಂಡು ಹೋಗಿರಿ. ತಲೆಮಾರುಗಳ ಅಂತರದಿಂದ ಒಂದು ಮನೆಯಲ್ಲಿ ಹಿರಿಯರು ಮತ್ತು ಕಿರಿಯರು ತಿನ್ನುವ, ಇಷ್ಟಪಡುವ ಆಹಾರದಲ್ಲಿ ವ್ಯತ್ಯಾಸ ಇರುತ್ತದೆ. ಹಿರಿಯರಿಗೆ ಅವರು ಇಚ್ಚಿಸುವ ಆಹಾರ ತಿನ್ನಲು ಅವಕಾಶ ಮಾಡಿಕೊಡಬೇಕು. ನಿಮ್ಮ ಜೀವನದ ಯಾವುದೇ ದೊಡ್ಡ ದೊಡ್ಡ ವಿಷಯಗಳ ತೀರ್ಮಾನ ಕೈಗೊಳ್ಳುವಾಗ ಅವರ ಉಪದೇಶವನ್ನು ಪಡೆಯಿರಿ. ತಂತ್ರಜ್ಞಾನದಲ್ಲಿ ಏನೂ ಅರಿಯದಿದ್ದರೂ, ವಿದ್ಯಾಭ್ಯಾಸ ಇಲ್ಲದಿದ್ದರೂ ನಿಮಗಿಂತ ಹೆಚ್ಚು ಅನುಭವವನ್ನು ಹೊಂದಿರುತ್ತಾರೆ. ನಿಮ್ಮ ರಜಾ ದಿನಗಳನ್ನು ಅವರೊಂದಿಗೆ ಕಳೆಯಿರಿ. ಅವರ ಮುಖದಲ್ಲಿ ನಗು ಮತ್ತು ಮನಸ್ಸಿನಲ್ಲಿ ಸಮಾಧಾನವನ್ನು ತರಲು ಪ್ರತ್ನಿಸಿರಿ. ಮೊಮ್ಮಕ್ಕಳೊಂದಿಗೆ ಆಟವಾಡಲು ಮತ್ತು ಸಮಯವನ್ನು ಕಳೆಯಲು ಅವಕಾಶವನ್ನು ಮಾಡಿಕೊಡಿರಿ.

ಯಾವುದಾದರೊಂದು ಮಕ್ಕಳಲ್ಲಿ ಹೆಚ್ಚು ಪ್ರೀತಿ, ಒಲವು ಇರುವುದು ಸ್ವಾಭಾವಿಕವೂ, ಮನುಷ್ಯನ ನೈಸರ್ಗಿಕವೂ ಆಗಿರುತ್ತದೆ. ಕೆಲವೊಮ್ಮೆ ನೀವು ಎಷ್ಟು ಉಪಕಾರ, ಖರ್ಚು, ಒಳಿತು, ಸೇವೆ, ಸದ್ವರ್ತನೆ ಮಾಡಿದರೂ ನಿಮ್ಮನ್ನು ನಿರ್ಲಕ್ಷಿಸುವ ಅಥವಾ ನಿಮ್ಮ ಮೇಲೆ ಅನ್ಯಾಯವಾಗುತ್ತಿರುವಾಗಲೂ ನೀವು ಸಹನೆ ವಹಿಸುವುದು ಒಂದು ರೀತಿಯ ಸದ್ವರ್ತನೆ ಆಗಿರುವುದು. ನಿಮ್ಮ ಸತ್ಕರ್ಮಗಳನ್ನು ಗುಪ್ತವಾಗಿಡಿರಿ. ನೀವು ತಂದೆ ತಾಯಿಯವರಿಗೆ ಮಾಡುವ ಯಾವುದೇ ಸಣ್ಣ ಪುಣ್ಯಕರ್ಮವನ್ನು ಅಲ್ಲಾಹನು ಕಡೆಗಣಿಸಲಾರನು. ಅವರಿಂದ ಯಾವುದೇ ಅಹಿತಕರ ಘಟನೆ ನಡೆದಿದ್ದರೆ ಅದನ್ನು ಮರೆತುಬಿಡಿರಿ. ಮನುಷ್ಯನಿಗೆ ಪ್ರಾಯವಾದಂತೆ ಮರೆತು ಹೋಗುವಂತಹ ಅಥವಾ ಹೇಳಿದ್ದನ್ನೇ ಹೇಳುವ ಅಭ್ಯಾಸವಿರುತ್ತದೆ. ಇದು ವೃದ್ಧಾಪ್ಯದ ಲಕ್ಷಣವಾಗಿದೆ. ಇಂತಹ ಸಮಯದಲ್ಲಿ ಮನುಷ್ಯನಿಗೆ ಕೋಪ ಬರುವುದು ಮತ್ತು ಹಟ ಹಿಡಿಯುವುದು ಸಹಜವಾಗಿರುತ್ತದೆ. ಆದರೆ ನಿಮ್ಮ ಮನಸ್ಸಿನೊಳಗಿರುವ ಭಾವನೆಗಳನ್ನು ಅವರೊಂದಿಗೆ ವ್ಯಕ್ತಪಡಿಸಬೇಡಿರಿ.

“ಮಾತಾಪಿತರೊಡನೆ ಸೌಜನ್ಯದಿಂದ ವರ್ತಿಸಿರಿ. ಅವರ ಪೈಕಿ ಒಬ್ಬರು ಅಥವಾ ಅವರಿಬ್ಬರೂ ವೃದ್ಧರಾಗಿ ನಿಮ್ಮ ಬಳಿಯಲ್ಲಿದ್ದರೆ, ಅವರ ಬಗ್ಗೆ ಚಕಾರವೆತ್ತಬೇಡಿರಿ. ಮತ್ತು ಅವರನ್ನು ಜರೆಯಬೇಡಿರಿ. ಅವರೊಂದಿಗೆ ಗೌರವಪೂರ್ವಕವಾಗಿ ಮಾತನಾಡಿರಿ.” (ಪವಿತ್ರ ಕುರ್ ಆನ್ 17:23)

ನೀವು ಮಾತಾಪಿತರ ಸೇವೆ ಮಾಡಿದುದಕ್ಕಾಗಿ ಅವರಿಂದಲೇ ಪ್ರತಿಫಲವನ್ನು ನಿರೀಕ್ಷಿಸಬೇಡಿರಿ. ನೀವು ಮಾಡಿದ ಕರ್ಮಕ್ಕೆ ನೀವು ನಿರೀಕ್ಷಿಸಲು ಅಸಾಧ್ಯವಾದ ಪ್ರತಿಫಲ ಅಲ್ಲಾಹನು ನೀಡುವನು. ಅದು ಹಣದ ರೂಪದಲ್ಲಿಯೇ ಸಿಗಬೇಕೆಂದಿಲ್ಲ. ಅದು ಬೇರೆ ಯಾವುದಾದರೂ ರೀತಿಯ ಅನುಗ್ರಹದ ರೂಪದಲ್ಲಿ ಬರಬಹುದು. ನಾವು ಮಾಡುವ ಎಲ್ಲ ಕರ್ಮಗಳಿಗೆ ಇಹಲೋಕದಲ್ಲಿಯೇ ಪ್ರತಿಫಲ ಸಿಗಬೇಕೆಂದಿಲ್ಲ. ಅವರು ಜೀವಂತವಿರುವಾಗಲೇ ಯಾವುದೇ ವಸ್ತುವನ್ನು ಎಲ್ಲ ಮಕ್ಕಳಿಗೂ ಸಮಾನವಾಗಿ ಪಾಲು ಮಾಡಿ ನೀಡಬೇಕೆಂದು ಆಶಿಸಬೇಡಿರಿ, ನಿರೀಕ್ಷಿಸಬೇಡಿರಿ ಮತ್ತು ಅದನ್ನು ಒತ್ತಾಯಿಸಬೇಡಿರಿ.

“ತಂದೆತಾಯಂದಿರು ಮಕ್ಕಳ ಸೊತ್ತಿನಿಂದ ಮಾನ್ಯವಾದ ಆಹಾರವನ್ನು ಪಡೆಯಬಹುದಾಗಿದೆ. ಆದರೆ ಮಕ್ಕಳಿಗೆ ತಂದೆ ತಾಯಿಯವರ ಅನುಮತಿಯಿಲ್ಲದೆ ಅವರ ಸೊತ್ತಿನಿಂದ ಯಾವುದನ್ನೂ ಪಡೆಯುವಂತಿಲ್ಲ.” -ಪ್ರವಾದಿ ಮುಹಮ್ಮದ್(ಸ)

ಆದರೆ ಮಾತಾಪಿತರು ಮಕ್ಕಳ ಸಂಪತ್ತನ್ನು ತಮ್ಮ ಒಡೆತನದಲ್ಲಿರಿಸಬಾರದು. ಮಗನ ಹಣವನ್ನು ತಮ್ಮ ಹಣವೆಂದೇ ಪರಿಗಣಿಸಿ ದೈನಂದಿನ ಅಗತ್ಯಗಳಿಗೆ ಖರ್ಚು ಮಾಡಿರಿ. ತಮ್ಮ ಹಣದಿಂದ ಯಾವೆಲ್ಲ ವಸ್ತುಗಳಿಗೆ ಖರ್ಚು ಮಾಡುತ್ತಿದ್ದಿರಿ ಅದಕ್ಕೆಲ್ಲ ಖರ್ಚು ಮಾಡಿರಿ. ನಿಮ್ಮ ಹಣದಿಂದ ಯಾವ ವಸ್ತುಗಳಿಗೆ ಖರ್ಚು ಮಾಡುವುದಿಲ್ಲವೋ ಅದನ್ನು ಮಕ್ಕಳ ಹಣದಿಂದ ಖರ್ಚು ಮಾಡಲು ಅವರಿಗೆ ಆದೇಶಿಸಬೇಡಿರಿ. ಮಕ್ಕಳಿಗೆ ಅಸಾಧ್ಯವಾದುದನ್ನು ಆದೇಶಿಸಿ ಮಕ್ಕಳು ಸದ್ವರ್ತನೆ ತೋರುವುದಿಲ್ಲ ಎಂದು ಹೇಳಿ ಪ್ರಯೋಜನವಿಲ್ಲ.

ನಿಮ್ಮ ಮಕ್ಕಳಿಗೆ ಮಾತಾಪಿತರ ಸೇವೆ ಹೇಗೆ ಮಾಡಬೇಕೆಂದು ಉಪದೇಶಿವುದಕ್ಕಿಂತಲೂ ಹೆಚ್ಚು ಅವರು ನೀವು ಮಾಡುವುದನ್ನೇ ನೋಡಿ ಕಲಿಯುತ್ತಾರೆ. ನೀವು ಮಾಡಿದ್ದೇ ಮರಳಿ ಸಿಗುತ್ತದೆ. ಮಾತಾಪಿತರು ಮಕ್ಕಳ ಬಗ್ಗೆ ಮತ್ತು ಮಕ್ಕಳು ಮಾತಾಪಿತರ ಬಗ್ಗೆ ನಿರ್ಲಕ್ಷ್ಯತನ ತೋರುವ ಹಾಗೂ ಪರಸ್ಪರ ಭಯಪಡುವಂತಹ ವಾತಾವರಣ ಆಧುನಿಕ ಕಾಲದಲ್ಲಿ ಅನೇಕ ಮನೆಗಳಲ್ಲಿ ಉಂಟಾಗಿದೆ. ಇಸ್ಲಾಮ್ ಧರ್ಮವು ಪರಸ್ಪರ ಪ್ರೀತಿ, ವಾತ್ಸಲ್ಯ, ಗೌರವ ಹಾಗೂ ಸ್ವಾತಂತ್ರ್ಯವನ್ನು ಬೋಧಿಸುವ ಧರ್ಮವಾಗಿದೆ. ಪರಸ್ಪರರನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸುವುದು ಮತ್ತು ಸಂಪತ್ತಿನ ಮೇಲಿರುವ ಅತಿಯಾದ ಮೋಹವು ಹಲವು ಮಾತಾಪಿತರ ಮತ್ತು ಮಕ್ಕಳ ನಡುವಿನ ಸಂಬಂಧಗಳ ಶಿಥಿಲವಾಗಲು ಕಾರಣವಾಗಿದೆ. ಅವರು ಯಾವುದಾದರೂ ಮಕ್ಕಳಿಗೆ ಏನಾದರೂ ಹೆಚ್ಚು ಕೊಟ್ಟಿದ್ದರೆ ಆ ವಿಷಯಕ್ಕಾಗಿ ಅವರ ಮೇಲೆ ದ್ವೇಷ, ಅಸಮಾಧಾನವನ್ನಿಡಬೇಡಿರಿ. ಕೆಲವೊಮ್ಮೆ ಅವಶ್ಯಕತೆ, ಪರಿಸ್ಥಿತಿಗೆ ತಕ್ಕಂತೆ ಖರ್ಚು ಮಾಡಬೇಕಾಗುತ್ತದೆ. ಆದರೆ ಪ್ರವಾದಿ ವಚನಗಳಲ್ಲಿ ಮಕ್ಕಳ ಮಧ್ಯೆ ಸಮಾನತೆ ಪಾಲಿಸುವುದಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಮಕ್ಕಳ ಮಧ್ಯೆ ನ್ಯಾಯ ಪಾಲನೆ ಮಾಡದಿರುವುದೇ ಹಲವು ಸಮಸ್ಯೆಗಳಿಗೆ ಕಾರಣ. ನಮ್ಮ ವ್ಯವಹಾರಗಳನ್ನೆಲ್ಲಾ ಪವಿತ್ರ ಕುರ್ ಆನ್ ಮತ್ತು ಪ್ರವಾದಿ ವಚನದಂತೆಯೇ ಮಾಡಿದಾಗ ಮಾತ್ರ ಸಂಬಂಧ ಮತ್ತು ಜೀವನ ಸುಂದರವಾಗುವುದು.

ದೂರದ ಊರಿನ ಉದ್ಯೋಗ ಹಾಗೂ ಅಣು ಕುಟುಂಬಗಳಿಂದ ಮಾತಾಪಿತರು ಒಂಟಿಯಾಗುತ್ತಾರೆ. ಒಂದಕ್ಕಿಂತ ಹೆಚ್ಚು ಮಕ್ಕಳು ಆಧುನಿಕ ಕಾಲದಲ್ಲಿ ಒಂದೇ ಮನೆಯಲ್ಲಿ ವಾಸಿಸಲು ಅಸಾಧ್ಯ. ಇಂತಹ ಸಂದರ್ಭಗಳಲ್ಲಿ ಮಾತಾಪಿತರು ತಮ್ಮ ಮನೆಯನ್ನು ಬಿಟ್ಟು ಮಕ್ಕಳ ಜೊತೆ ವಾಸಿಸಲು ತಯಾರಾಗುವುದು ಉತ್ತಮ. ಅವರಿಗೆ ಇಷ್ಟವಿರುವ ಮಕ್ಕಳ ಜೊತೆ ವಾಸಿಸಲು ಬೇಕಾದಂತಹ ವಾತಾವರಣವನ್ನು ಸೃಷ್ಟಿಮಾಡಿರಿ. ತಂದೆ ತಾಯಿಯರ ಸೇವೆ ಮಾಡಲು ಮಕ್ಕಳೊಂದಿಗೆ ಹಂಚಿಕೆ ಮಾಡಿ ಹಾಕಬೇಡಿರಿ.

ಮಾತಾಪಿತರು ಅನಾರೋಗ್ಯದಿಂದಿರುವಾಗ ಸಾಧ್ಯವಾದಷ್ಟು ಅವರೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ. ಇಂತಹ ಸಮಯದಲ್ಲಿ ಮಕ್ಕಳ ನಡುವೆ ಒಗ್ಗಟ್ಟು ಅಗತ್ಯವಾಗಿದೆ. ಎಲ್ಲರೂ ತಮ್ಮಿಂದ ಸಾಧ್ಯವಾದಷ್ಟು ಸೇವೆ ಮಾಡಲು ಪ್ರಯತ್ನಿಸಬೇಕು. ಒಬ್ಬರ ಮೇಲೆಯೇ ಬಿಟ್ಟು ಬಿಟ್ಟುವುದರಿಂದ ಮಾನಸಿಕ ಅಸ್ವಸ್ಥ ಹಾಗೂ ಅಸಮಾಧಾನವುಂಟಾಗುವುದು ಸಹಜ. ತಮ್ಮ ಸಹೋದರರು ಹೆತ್ತವರನ್ನು ಸರಿಯಾಗಿ ಸೇವೆ ಮಾಡುತ್ತಿದ್ದಾರೆಯೇ ಎಂದು ಪರಿಶೀಲಿಸುವುದು, ಮಾತಾಪಿತರನ್ನು ನೋಡಿಕೊಳ್ಳುವುದರಲ್ಲಿ, ಖರ್ಚು ಮಾಡುವುದರಲ್ಲಿ ಲೋಪದೋಷ ಮಾಡುತ್ತಿದ್ದಾರೆ ಎಂದು ದೂರುವುದು ಆಧುನಿಕ ಕಾಲದಲ್ಲಿ ಸಾಮಾನ್ಯ ರೂಢಿಯಾಗಿ ಬಿಟ್ಟಿದೆ. ಇದೊಂದು ಪುಣ್ಯ ಕರ್ಮವಲ್ಲ. ನಮಗೆ ಸಿಕ್ಕಿದ ಅವಕಾಶದಲ್ಲಿ ನಮ್ಮ ಕರ್ಮಪತ್ರವನ್ನು ತುಂಬಿಸುವುದು ಮಾತ್ರ ನಮ್ಮ ಕೆಲಸ.

ಮಾತಾಪಿತರ ಸಂಬಂಧಿಕರೊಂದಿಗೆ ಹಾಗೂ ಗೆಳೆಯರೊಂದಿಗೂ ಅವರು ಜೀವಂತವಿರುವಾಗಲೂ ಮರಣಾನಂತರವೂ ಉತ್ತಮ ಸಂಬಂಧವನ್ನಿಡಿರಿ. ಮಾತಾಪಿತರು ಮತ್ತು ಮಕ್ಕಳ ಸಂಬಂಧ ಮರಣದೊಂದಿಗೆ ಕೊನೆಗೊಳ್ಳುವುದಿಲ್ಲ. ಅವರು ಜೀವಂತವಿರುವಾಗಲೂ ಮರಣಾನಂತರವೂ ಕರುಣೆ ತೋರಲು, ಪಾಪ ವಿಮೋಚನೆ ಹಾಗೂ ಅವರ ಇಹಪರ ಜೀವನದ ಯಶಸ್ಸಿಗಾಗಿ ಸದಾ ಪ್ರಾರ್ಥಿಸುತ್ತಿರಿ.

“ಓ ನನ್ನ ಪ್ರಭೂ ಇವರು ನನ್ನ ಚಿಕ್ಕಂದಿನಲ್ಲಿ ದಯಾ ವಾತ್ಸಲ್ಯಗಳಿಂದ ನನ್ನನ್ನು ಸಾಕಿದಂತೆಯೇ ನೀನು ಅವರ ಮೇಲೆ ಕೃಪೆ ತೋರು.” (ಪವಿತ್ರ ಕುರ್ ಆನ್ 17 :24)

“ಓ ನನ್ನ ಪ್ರಭೂ, ನನ್ನನ್ನೂ ನನ್ನ ಮಾತಾಪಿತರನ್ನೂ ಸಕಲ ಸತ್ಯವಿಶ್ವಾಸಿಗಳನ್ನೂ ವಿಚಾರಣೆ ನಡೆಸಲ್ಪಡುವ ಆ ದಿನ ಕ್ಷಮಿಸಿ ಬಿಡು. (ಪವಿತ್ರ ಕುರ್ ಆನ್14:41)