ಯಮನ್ ಆಂತರಿಕ ಸಂಘರ್ಷಕ್ಕೆ 3,774 ಮಕ್ಕಳು ಬಲಿ: ಯುನಿಸೆಫ್ ವರದಿ

0
328

ಸನ್ಮಾರ್ಗ ವಾರ್ತೆ

2015ರಿಂದ 2022ರ ನಡುವೆ ಯಮನ್‌ನ ಆಂತರಿಕ ಸಂಘರ್ಷಕ್ಕೆ 3774 ಮಕ್ಕಳು ಬಲಿಯಾಗಿವೆ ಎಂದು ಯುನಿಸೆಫ್(UNICEF) ಹೇಳಿದೆ. ಅಲ್ಲದೆ 7245 ಮಕ್ಕಳು ಈ ಸಂಘರ್ಷಕ್ಕೆ ಸಿಲುಕಿಕೊಂಡು ನಲುಗುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಆದ್ದರಿಂದ ಅತಿ ಶೀಘ್ರವಾಗಿ ಈ ಸಂಘರ್ಷಕ್ಕೆ ವಿರಾಮವನ್ನು ಹಾಕುವ ಪ್ರಯತ್ನಗಳಾಗಬೇಕು ಎಂದು ಯುನಿಸೆಫ್ ಆಗ್ರಹಿಸಿದೆ. ಈ ಹಿಂದೆ ಘೋಷಿಸಲಾಗಿದ್ದ ಯುದ್ಧ ವಿರಾಮ ಒಪ್ಪಂದವು ಎಪ್ರಿಲ್‌ಗೆ ಕೊನೆಗೊಂಡಿದ್ದು ಅದರ ನವೀಕರಣ ಇನ್ನೂ ಆಗಿಲ್ಲ. 2015ರಿಂದ 2022 ಸೆಪ್ಟೆಂಬರ್ ವರೆಗೆ 3904 ಮಕ್ಕಳನ್ನು ಬಾಲ ಯೋಧರಾಗಿ ಸಂಘರ್ಷ ನಿರತ ಗುಂಪುಗಳು ತಮ್ಮ ತಂಡಕ್ಕೆ ಸೇರಿಸಿಕೊಂಡು ಅವರ ಹತ್ಯೆಗೆ ಕಾರಣವಾಗಿವೆ ಎಂದು ಯುನಿಸೆಫ್ ತಿಳಿಸಿದೆ.

ಹುತಿಗಳು ನೆಲ ಬಾಂಬ್ ಉಪಯೋಗಿಸುತ್ತಿದ್ದಾರೆ. ಈ ಬಾಂಬಿಗೆ ಕಳೆದ ಜುಲೈಯಿಂದ ಸೆಪ್ಟೆಂಬರ್ ನಡುವೆ 74 ಮಕ್ಕಳು ಬಲಿಯಾಗಿವೆ. ಹುತಿಗಳು ತಮ್ಮ ತಂಡಕ್ಕೆ ಬಹಿರಂಗವಾಗಿ ಮಕ್ಕಳನ್ನು ಸೇರಿಸಿ ಕೊಳ್ಳುತ್ತಿದ್ದಾರೆ. ಸಮ್ಮರ್ ಕ್ಯಾಂಪ್‌ನ ಮೂಲಕ ಈ ಸೇರ್ಪಡೆ ನಡೆಯುತ್ತಿದೆ ಎಂದು ಯುನಿಸೆಫ್ ಹೇಳಿದೆ.

ಯುನಿಸೆಫ್ ಈಗಾಗಲೇ ಯಮನ್‌ನಲ್ಲಿ 10.3 ಬಿಲಿಯನ್ ಡಾಲರ್ ಮೊತ್ತದ ಮಾನವೀಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿಶೇಷವಾಗಿ ಮಕ್ಕಳಿಗಾಗಿ ಈ ಮೊತ್ತವನ್ನು ವ್ಯಯಿಸಲಾಗುತ್ತಿದೆ. ಅಸಂಖ್ಯ ಮಕ್ಕಳು ಅಂಗ ಊನತೆಯಿಂದ ಬಳಲುತ್ತಿದ್ದಾರೆ ಎಂದು ಕೂಡ ಯುನಿಸೆಫ್ ತಿಳಿಸಿದೆ.