ಹೊಸ ಪಕ್ಷದ ಘೋಷಣೆಯ ಬೆನ್ನಿಗೆ ಜನಾರ್ದನ ರೆಡ್ಡಿ ವಿರುದ್ಧ ಎದ್ದು ನಿಂತ ಸಿಬಿಐ

0
398

ಸನ್ಮಾರ್ಗ ವಾರ್ತೆ

ಬೆಂಗಳೂರು: ಹೊಸ ಪಕ್ಷದ ಘೋಷಣೆಯ ಬೆನ್ನಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ನಿರ್ದಿಷ್ಟ ತನಿಖೆಗೆ ಸಂಬಂಧಿಸಿ ಅನುಮತಿಯನ್ನು ಕೋರಿ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದ ಮನವಿ ಕಳೆದ ಆಗಸ್ಟ್ ನಿಂದಲೇ ಬಾಕಿ ಇದ್ದು ಈ ಬಗ್ಗೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಿಬಿಐ ಹೈಕೋರ್ಟಿಗೆ ಮನವಿ ಸಲ್ಲಿಸಿದೆ.

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಆಸ್ತಿ ಜಪ್ತಿ ಮಾಡಲು ಕರ್ನಾಟಕ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಅಕ್ರಮ ಹಣದ ಮೂಲದಿಂದ ಖರೀದಿಸಿದ್ದ ಜನಾರ್ದನ ರೆಡ್ಡಿ ಆಸ್ತಿಯನ್ನು ಜಪ್ತಿ ಮಾಡಿ ಎಂದು ಕರ್ನಾಟಕ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೂ ಅನುಮತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಿಬಿಐ ಹೈಕೋರ್ಟ್‌ಗೆ ಮನವಿ ಮಾಡಿದೆ.

ಅಕ್ರಮ ಹಣದ ಮೂಲದಿಂದ ಜನಾರ್ದನ ರೆಡ್ಡಿ ಖರೀದಿಸಿದ್ದ, 200 ಕ್ಕೂ ಹೆಚ್ಚು ಆಸ್ತಿಯನ್ನು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಪತ್ತೆ ಹಚ್ಚಲಾಗಿದೆ. ಹೀಗಾಗಿ ಆಸ್ತಿ ಜಪ್ತಿಗೆ ಅನುಮತಿ ಕೋರಿ ಕರ್ನಾಟಕ ಸರ್ಕಾರಕ್ಕೆ 2022 ರ ಆಗಸ್ಟ್ 30 ರಂದೇ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಆದರೆ ಇದುವರೆಗೂ ರೆಡ್ಡಿ ಆಸ್ತಿ ಜಪ್ತಿಗೆ ಸರ್ಕಾರ ಅನುಮತಿ ನೀಡಿಲ್ಲ. ವಿಳಂಬ ಧೋರಣೆ ಅನುಸರಿಸುತ್ತಿದೆ. ಇನ್ನು ಈ ವಿಚಾರ ತಿಳಿದು ಜನಾರ್ದನ ರೆಡ್ಡಿ ಸುಮಾರು 19.14 ಕೋಟಿ ಮೌಲ್ಯದ ಆಸ್ತಿ ಮಾರಾಟಕ್ಕೆ ಪ್ರಯತ್ನ ಮಾಡ್ತಿದ್ದಾರೆ ಅನ್ನೋ ಆರೋಪ ಇದೆ. ಹೀಗಾಗಿ ರೆಡ್ಡಿ ಆಸ್ತಿ ಜಪ್ತಿ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಹೈಕೋರ್ಟ್ನಲ್ಲಿ ಸಿಬಿಐ ಅರ್ಜಿ ಸಲ್ಲಿಸಿದೆ.

ಬಿಜೆಪಿ ಸೆಡ್ಡು ಹೊಡೆದು ಹೊಸ ಪಕ್ಷ ಘೋಷಿಸಿ, ರಾಜ್ಯ ರಾಜಕಾರಣದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಜನಾರ್ದನ ರೆಡ್ಡಿ ವಿರುದ್ಧ ಇದೀಗ ಪರೋಕ್ಷವಾಗಿ ಸಿಬಿಐ ಎದ್ದು ನಿಂತಿದೆ. ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಇನ್ನಾದರೂ ರಾಜ್ಯ ಸರ್ಕಾರ ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿ ನೀಡುತ್ತಾ..? ಇನ್ನು ಹೈಕೋರ್ಟ್ ಸರ್ಕಾರಕ್ಕೆ ಹಾಗೂ ಸಿಬಿಐಗೆ ಏನು ಹೇಳುತ್ತೆ ಅನ್ನೋದನ್ನು ಕಾದುನೋಡಬೇಕಿದೆ.