ಸನ್ಮಾರ್ಗ ವಾರ್ತೆ
ಶ್ರೀನಗರ: ಭಯೋತ್ಪಾದನೆ ಆರೋಪದಲ್ಲಿ ಯುಎಪಿಎ ಹೊರಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎಐಎ) ಬಂಧಿಸಿದ್ದ ಪತ್ರಕರ್ತನನ್ನು ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಶ್ರೀನಗರ ಮೂಲದ ಸ್ವತಂತ್ರ ಫೋಟೋ ಜರ್ನಲಿಸ್ಟ್ ಮುಹಮ್ಮದ್ ಮನನ್ ದರ್ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದರು. ಅವರ ವಿರುದ್ಧದ ಆರೋಪಗಳು “ಕೇವಲ ಊಹಾಪೋಹಗಳು ಮಾತ್ರ” ಎಂಬ ಹೇಳಿಕೆಯೊಂದಿಗೆ ನ್ಯಾಯಾಲಯ ಜಾಮೀನು ನೀಡಿದೆ.
2021ರ ಅಕ್ಟೋಬರ್ನಲ್ಲಿ ಆತನ ಸಹೋದರ ಹನನ್ ದರ್ ಸೇರಿದಂತೆ 12 ಜನರೊಂದಿಗೆ ಎನ್ಐಎ ಮನನ್ರನ್ನು ಬಂಧಿಸಿತ್ತು. ಮಂಗಳವಾರ ರಾತ್ರಿ 9 ಗಂಟೆಗೆ ಜೈಲಿನಿಂದ ಹೊರಬಂದ ಅವರನ್ನು ವಕೀಲರ ಸಮ್ಮುಖದಲ್ಲಿ ಕುಟುಂಬ ಸದಸ್ಯರು ಬರಮಾಡಿಕೊಂಡರು. ಪತ್ರಿಕೋದ್ಯಮದಲ್ಲಿ ಮುಂದುವರಿಯುವ ಬಯಕೆಯನ್ನು ಮನನ್ ವ್ಯಕ್ತಪಡಿಸಿದ್ದಾರೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.
ಭಾರತದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಇತರ ರಾಜ್ಯಗಳಲ್ಲಿ ಹಿಂಸಾತ್ಮಕ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಆರೋಪ ಸಾಬೀತುಪಡಿಸಲು ಕೇಂದ್ರೀಯ ಸಂಸ್ಥೆಯ ಸಾಕ್ಷ್ಯಗಳು ಸಾಕಾಗುವುದಿಲ್ಲ ಎಂದು ಜನವರಿ 2ರಂದು ನೀಡಲಾದ ಜಾಮೀನು ಅರ್ಜಿ ಆದೇಶದಲ್ಲಿ ನ್ಯಾಯಾಲಯವು ಬೆಟ್ಟು ಮಾಡಿದೆ.
Mohammad Manan Dar, a Kashmiri journalist held on charges of terrorism by the NIA, walked out of Tihar jail some moments ago after a court in Delhi granted him bail. He was incarcerated for more than a year. I reported about his arrest here https://t.co/vVaFIHQMJA pic.twitter.com/BxgQ5SvSAL
— Jehangir Ali (@Gaamuk) January 3, 2023
ಫೋಟೊ ಜರ್ನಲಿಸ್ಟ್ ಸೋಗಿನಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಭದ್ರತಾ ಪಡೆಗಳ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಮನನ್ರನ್ನು ಬಂಧಿಸಲಾಗಿತ್ತು.












