ಮುದ್ರಣ ಮಾಧ್ಯಮಗಳಂತೆ ದೃಶ್ಯ ಮಾಧ್ಯಮಗಳಿಗೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಯಾಕಿಲ್ಲ?: ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

0
353

ಸನ್ಮಾರ್ಗ ವಾರ್ತೆ:

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳು ಟಿಆರ್‌ಪಿಗಾಗಿ ಸ್ಪರ್ಧೆಗೆ ಇಳಿದಿದ್ದು, ಸಮಾಜವನ್ನು ಇಬ್ಭಾಗ ಮಾಡುತ್ತಿವೆ. ದ್ವೇಷ ಭಾಷಣ ಬಿತ್ತುವ ಅಜೆಂಡಾಗಳಲ್ಲಿ ಟಿ.ವಿ ನಿರೂಪಕರೂ ಭಾಗಿಯಾಗಿರುವುದು ಅಚ್ಚರಿಯುಂಟು ಮಾಡಿದೆ. ಹೀಗೆಂದು ಖುದ್ದು ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಟಿವಿ ಕಾರ್ಯಕ್ರಮಗಳ ಭಾಗವಾದ ಸುದ್ದಿ ನಿರೂಪಕರೇ ಸಮಸ್ಯೆಯಾದರೆ ಏನು ಮಾಡುವುದು ಎಂದೂ ಕೂಡ ಸರ್ವೋಚ್ಛ ನ್ಯಾಯಾಲಯ ಪ್ರಶ್ನಿಸಿದೆ.

ದ್ವೇಷ ಭಾಷಣ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳುವಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನರನ್ನು ಒಳಗೊಂಡ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ದೇಶದಲ್ಲಿ ದ್ವೇಷ ಭಾಷಣವು ಅತ್ಯಂತ ಅಪಾಯಕಾರಿಯಾಗಿದ್ದು, ಮುಕ್ತ ಮತ್ತು ಸಮತೋಲಿತ ವರದಿ ಬಿತ್ತರಿಸುವ ಮಾಧ್ಯಮಗಳು ಬೇಕಾಗಿವೆ. ಮುದ್ರಣ ಮಾಧ್ಯಮಗಳಂತೆ ದೃಶ್ಯ ಮಾಧ್ಯಮಗಳಿಗೆ ‘ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ’ ಏಕಿಲ್ಲ? ಎಂದು ನ್ಯಾಯಪೀಠ ಪ್ರಶ್ನಿಸಿದೆ.

ವಾಸ್ತವವಾಗಿ ಸುದ್ದಿ ವಾಹಿನಿಗಳು ಪ್ರತಿಸ್ಪರ್ಧೆಗಿಳಿದಿವೆ. ಅವು ರೋಚಕತೆಗೊಳಿಸಲು ಸದಾ ಮುಂದಾಗಿವೆ. ಇದನ್ನು ಹೇಗೆ ನಿಯಂತ್ರಿಸುವಿರಿ? ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯ ಮುಖ್ಯ. ಸ್ವಾತಂತ್ರ‍್ಯದ ಸಮಸ್ಯೆ ಏನೆಂದರೆ ಅದು ವೀಕ್ಷಕರಿಗೆ ಸಂಬಂಧಿಸಿರುವುದು. ಜನರಿಗೆ ವಾಹಿನಿಗಳ ಕಾರ್ಯಸೂಚಿ ಅರಿವಾಗಬಲ್ಲದೇ ಎಂಬ ಪ್ರಶ್ನೆಯೂ ಇದೆ. ಇವುಗಳು ತಮ್ಮ ಹೂಡಿಕೆದಾರರ ಮೂಗಿನ ನೇರಕ್ಕೆ ನಡೆಯುತ್ತಿದ್ದು, ಭಾರತದಲ್ಲಿ ವಿಭಜನೆ ಉಂಟು ಮಾಡುತ್ತಿವೆ ಎಂದು ನ್ಯಾ. ಜೋಸೆಫ್ ವಿಚಾರಣೆ ಸಂದರ್ಭದಲ್ಲಿ ತಿಳಿಸಿದರು.

ಟಿವಿ ಕಾರ್ಯಕ್ರಮಗಳ ಭಾಗವಾದ ಸುದ್ದಿ ನಿರೂಪಕರೇ ಸಮಸ್ಯೆಯಾದರೆ ಏನು ಮಾಡುವುದು? ಎನ್‌ಬಿಎಸ್‌ಎ ಪಕ್ಷಪಾತಿಯಾಗಬಾರದು. ಏಕಮುಖ ಕಾರ್ಯಕ್ರಮ ಪ್ರಸಾರ ಮಾಡಬಾರದು ಎಂದು ತಿಳಿಸಿರುವ ನ್ಯಾಯಪೀಠ, ಸುದ್ದಿ ನಿರೂಪಕರಿಗೆ ದಂಡ ವಿಧಿಸುವಂತಾದರೆ, ತಾವು ದಂಡ ತೆರಬೇಕಾಗುತ್ತದೆ ಎಂಬ ಅರಿವು ಅವರಿಗೆ ಆಗುತ್ತದೆ. ಇಂತಹ ಸುದ್ದಿ ನಿರೂಪಕರನ್ನು ಸುದ್ದಿ ಪ್ರಸಾರದಿಂದ ಹೊರಗಿಡುವ ಬಗ್ಗೆಯೂ ಆಲೋಚಿಸಬಹುದು ಎಂದು ಪೀಠ ಹೇಳಿದೆ.