ಬಿಬಿಸಿ ಸಾಕ್ಷ್ಯಚಿತ್ರ ನಮ್ಮ ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಭೌಮತ್ವದ ಮೇಲೆ ಪರಿಣಾಮ ಬೀರದು: ಶಶಿ ತರೂರ್

0
351

ಸನ್ಮಾರ್ಗ ವಾರ್ತೆ

ತಿರುವನಂತಪುರಂ:  ಪ್ರಧಾನಿ ನರೇಂದ್ರ ಮೋದಿ ಹಾಗೂ ೨೦೦೨ರ ಗುಜರಾತ್ ಗಲಭೆ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ಮಾತನಾಡಿದ ಕಾಂಗ್ರೆಸ್‌ನ ತಿರುವನಂತಪುರಂ ಸಂಸದ ಶಶಿ ತರೂರ್, “ಇದು ಭಾರತದ ಸಾರ್ವಭೌಮತ್ವದ ಮೇಲೆ ಪರಿಣಾಮ ಬೀರುತ್ತದೆ ಎಂಬ ವಾದವು ಪರಿಣಾಮಕಾರಿಯಲ್ಲ. ಇದು ಭಾರತದ ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಭೌಮತ್ವವನ್ನು ದುರ್ಬಲಗೊಳಿಸಿಲ್ಲ” ಎಂದು ಅವರು ಹೇಳಿದರು.

ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ಮಾತನಾಡಿದ ಶಶಿ ತರೂರ್, “ಅಭಿವ್ಯಕ್ತಿ ಸ್ವಾತಂತ್ರ‍್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸರಕಾರ ಹೇಳಿದ್ದಕ್ಕೆ ನನಗೆ ಸಂತೋಷವಾಗಿದೆ. ಕೇರಳದ ಯುವ ಸಂಘಟನೆಯು ಸೆನ್ಸಾರ್‌ಶಿಪ್ ವಿರುದ್ಧ ಪ್ರತಿಭಟನೆಯಾಗಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸಿದೆ, ನಾನು ಕೂಡ ಅದರ ಪರವಾಗಿದ್ದೆ’’ ಎಂದರು. “ಇದು ಭಾರತದ ಸಾರ್ವಭೌಮತ್ವದ ಮೇಲೆ ಪರಿಣಾಮ ಬೀರುತ್ತದೆ ಎಂಬ ವಾದ ಪರಿಣಾಮಕಾರಿಯಾಗಿಲ್ಲ. ಅದು ಏನನ್ನೂ ದುರ್ಬಲಗೊಳಿಸಿಲ್ಲ. ನಮ್ಮ ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಭೌಮತ್ವದ ಮೇಲೆ ಸಾಕ್ಷ್ಯಚಿತ್ರವೊಂದು ಅಷ್ಟು ಸುಲಭವಾಗಿ ಪರಿಣಾಮ ಬೀರದು. ನಮ್ಮದು ಬಲಿಷ್ಠ ದೇಶ” ಎಂದರು.

2002 ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಇತ್ತು ಎಂದು ಆರೋಪಿಸಿ ಬಿಬಿಸಿ ಹೊರತಂದಿರುವ ಸಾಕ್ಷ್ಯಚಿತ್ರ, ಈಗ ಭಾರತದ ಕೆಲವು ರಾಜ್ಯಗಳ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಸದ್ದು ಮಾಡಲು ಆರಂಭಿಸಿದೆ. ಹೈದರಾಬಾದ್‌ನ ಒಂದು ವಿಶ್ವವಿದ್ಯಾಲಯ ಹಾಗೂ ಕೇರಳದ ಕಾಲೇಜೊಂದರಲ್ಲಿ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಸಲಾಗಿದೆ. ಇದೇ ವೇಳೆ ಕೇರಳದಲ್ಲಿ ಎಸ್‌ಎಫ್‌ಐ, ಡಿವೈಎಫ್‌ಐ ಸೇರಿದಂತೆ ಕೆಲವು ವಿದ್ಯಾರ್ಥಿ ಸಂಘಟನೆಗಳು ವಿವಿ/ಕಾಲೇಜುಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡುತ್ತೇವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಘೋಷಿಸಿವೆ. ಮಂಗಳವಾರ ದಿಲ್ಲಿಯ ಜೆಎನ್‌ಯುನಲ್ಲಿ ಕೂಡ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ ನಿರ್ಧರಿಸಿತ್ತಾದರೂ ಜೆಎನ್‌ಯು ಆಡಳಿತ ಮಂಡಳಿ ಅದಕ್ಕೆ ಅವಕಾಶ ನೀಡಿಲ್ಲ. ಆಗ ವಿದ್ಯಾರ್ಥಿಗಳು ಮೊಬೈಲ್, ಲ್ಯಾಪ್‌ಟಾಪ್‌ನಲ್ಲಿ ಚಿತ್ರ ವೀಕ್ಷಣೆ ಮಾಡಿದರು. ಈ ವೇಳೆ ಪ್ರದರ್ಶನಕ್ಕೆ ಯತ್ನಿಸಿದ ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಲಾಗಿದೆ.