ದೆಹಲಿ: ಚಲಿಸುತ್ತಿರುವ ಕಾರಿಗೆ ಬೆಂಕಿ: ತಾಯಿ, ಮಕ್ಕಳ ಸಾವು

0
849

ಹೊಸದಿಲ್ಲಿ,ಮಾ.11: ದಿಲ್ಲಿಯ ಅಕ್ಷರಧಾಮ ದೇಗುಲಕ್ಕೆ ಕುಟುಂಬದ ಸದಸ್ಯರರೊಂದಿಗೆ ಹೋಗುತ್ತಿದ್ದಾಗ ಅಕ್ಷರಧಾಮ ಮೇಲ್ಸೇತುವೆಯಲ್ಲಿ ಚಲಿಸುತ್ತಿರುವ ಕಾರಿಗೆ ಬೆಂಕಿ ಹಿಡಿದು ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳು ಸುಟ್ಟು ಹೋಗಿದ್ದಾರೆ. ಮೃತರನ್ನು ರಂಜನಾ ಮಿಶ್ರ(35), ಮಕ್ಕಳಾದ ರಿಥಿ, ನಿಕ್ಕಿ ಎಂದು ಗುರುತಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಪತಿ ಉಪೇಂದ್ರ ಮಿಶ್ರ ಹಾಗೂ ಮುಂದಿನ ಸೀಟಿನಲ್ಲಿ ಕೂತಿದ್ದ ಮಕ್ಕಳು ಪಾರಾಗಿದ್ದಾರೆ.

ಕಾರಿನಲ್ಲಿ ಬೆಂಕಿ ಹಿಡಿದೊಡನೆ ಉಪೇಂದ್ರ ಮಿಶ್ರ ಮುಂಬದಿಯಲ್ಲಿದ್ದ ಮಕ್ಕಳನ್ನು ಎತ್ತಿಕೊಂಡು ಹೊರಗೆ ಹಾರಿದರು. ಉಳಿದವರನ್ನು ರಕ್ಷಿಸಲು ಶ್ರಮಿಸಿದರೂ ಅಷ್ಟರಲ್ಲಿ ಬೆಂಕಿ ಆವರಿಸಿಕೊಂಡಿತು. ಹಿಂಬದಿಯ ಸೀಟಿನಲ್ಲಿ ಕುಳಿತ ಮೂವರ ದೇಹ ಗುರುತಿಸಲಾಗದ ರೀತಿ ಸುಟ್ಟು ಕರಕಲಾಗಿದೆ.

ಪೂರ್ವ ದಿಲ್ಲಿಯ ಅಕ್ಷರಧಾಮ ಮೇಲುಸೇತುವೆಯಲ್ಲಿ ರವಿವಾರ ಸಂಜೆ 6:30ಕ್ಕೆ ಘಟನೆ ನಡೆದಿದೆ. ಅಕ್ಷರಧಾಮ ದೇಗುಲಕ್ಕೆ ಹೋಗುತ್ತಿದ್ದಾಗ ಅಪಘಾತ ನಡೆಯಿತು. ಘಟನೆಯ ಕುರಿತು ವಿವರವಾದ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಚಲಿಸುತ್ತಿರುವಾಗ ಕಾರಿಗೆ ಬೆಂಕಿ ಹಿಡಿದಿದ್ದನ್ನು ಕಂಡ ಉಪೇಂದ್ರ ರವರು ಮೇಲ್ಸೇತುವೆ ಬಳಿ ಕಾರನ್ನು ನಿಲ್ಲಿಸಿದ್ದರು. ಡೋರಿನ ಕಡೆಯಲ್ಲಿ ಅರ್ಧ ಬೆಂಕಿ ಹಿಡಿದ ಕಾರಿನಿಂದ ಮಕ್ಕಳನ್ನು ಎತ್ತಿಕೊಂಡು ಉಪೇಂದ್ರ ಕಾರಿನ ಹೊರಗೆ ಹಾರಿದರು. ತದನಂತರ ಕಾರಿನ ಇತರ ಡೋರ್‍ಗಳನ್ನು ತೆರೆಯಲು ಮತ್ತು ಒಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ನಡುವೆ ಕಾರು ಸ್ಫೋಟಗೊಳ್ಳಬಹುದೆಂದು ಶಂಕಿಸಿದ ಸ್ಥಳೀಯರು ಮಿಶ್ರರನ್ನು ದೂರಕ್ಕೆ ಎಳೆದರು. ನಂತರ ಅಗ್ನಿ ಶಾಮಕ ದಳ ಬಂದು ಬೆಂಕಿ ಆರಿಸಿದೆ. ಉಪೇಂದ್ರ ಮಿಶ್ರ ಘಟನೆಯಿಂದ ತತ್ತರಿಸಿ ಹೋಗಿದ್ದು ಹೆಚ್ಚಿನ ವಿವರಗಳನ್ನು ಅವರಿಂದ ಕ್ರಮೇಣ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದರು.