ಸನ್ಮಾರ್ಗ ನ್ಯೂಸ್
ರಾಮನಗರ : ಗೋ ರಕ್ಷಣೆಯ ಹೆಸರಿನಲ್ಲಿ ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರೆಂದು ಕರೆಸಿಕೊಂಡ ದುಷ್ಕರ್ಮಿಗಳ ಗುಂಪೊಂದು, ಪರವಾನಿಗೆ ಸಹಿತ ಗೋವುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ತಡೆದು ದಾಂಧಲೆ ನಡೆಸಿದ್ದಲ್ಲದೆ, ಮುಸ್ಲಿಂ ವ್ಯಾಪಾರಿಯೋರ್ವನ ಸಾವಿಗೆ ಕಾರಣವಾದ ಘಟನೆ ರಾಮನಗರ ಜಿಲ್ಲೆಯ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಮಂಡ್ಯದ ನಿವಾಸಿ ಇದ್ರೀಸ್ ಪಾಷಾ (35) ಎಂದು ಗುರುತಿಸಲಾಗಿದ್ದು ವಾಹನದಲ್ಲಿದ್ದ ಸೈಯದ್ ಝಾಹೀರ್(40) ಎಂಬವರನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೋರ್ವ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಇದ್ರೀಸ್ ಸಾವಿನ ಹಿಂದೆ ಸಂಘಪರಿವಾರ ಬೆಂಬಲಿತ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಹಾಗೂ ಆತನ ಗುಂಪು ಇದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು ಎಂದು ಇದ್ರೀಸ್ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಪೊಲೀಸ್ ಠಾಣೆಯ ಎದುರು ಧರಣಿ ನಡೆಸಿ, ಒತ್ತಾಯಿಸಿದ್ದಾರೆ.
ಇದ್ರೀಸ್ ಅವರು ಗೋವುಗಳನ್ನು ಖರೀದಿಸಿದ ದಾಖಲೆಗಳನ್ನು ತೋರಿಸಿದ್ದರು. ಆದರೆ ಪುನೀತ್ ಮತ್ತು ತಂಡ ತಡೆದು ನಿಲ್ಲಿಸಿ ₹2 ಲಕ್ಷಕ್ಕೆ ಬೇಡಿಕೆ ಇಟ್ಟರು.
ಹಣ ಕೊಡದಿದ್ದರೆ ಅವರನ್ನು ಕೊಲ್ಲುತ್ತೇವೆ ಮತ್ತು ಪಾಕಿಸ್ತಾನಕ್ಕೆ ಹಿಂತಿರುಗಿ ಎಂದು ಹೇಳಿದ್ದಾರೆ. ನಂತರ ಆತ ಪಾಷಾನನ್ನು ಹಿಂಬಾಲಿಸಿ ಆತನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಪಾಷಾ ಗಾಯಗೊಂಡು ಸಾವನ್ನಪ್ಪಿದ್ದಾನೆ. ಪಾಷಾ ಅವರ ಇಬ್ಬರು ಸಹಚರರೂ ಗಾಯಗೊಂಡಿದ್ದಾರೆ ಎಂದು ಎಫ್ ಐ ಆರ್ನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯ ವಿವರ:
ಶುಕ್ರವಾರ ಮಧ್ಯರಾತ್ರಿಯಲ್ಲಿ ಗೂಡ್ಸ್ ವಾಹನದಲ್ಲಿ ಗೋವುಗಳನ್ನು ಮಳವಳ್ಳಿ ಕಡೆಯಿಂದ ತಮಿಳುನಾಡಿನ ಕುಮಂಗಲಗೆರೆಗೆ ಸಾಗಿಸುತ್ತಿದ್ದ ವೇಳೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ಕೆರೆಹಳ್ಳಿ ಹಾಗೂ ಆತನ ಸ್ನೇಹಿತರು ವಾಹನವನ್ನು ತಡೆದು ವಾಹನದಲ್ಲಿದ್ದ ಮೂವರ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಅನುಮಾನಾಸ್ಪದವಾಗಿ ಮೃತಪಟ್ಟ ಪಾಲಕರು ಇದೊಂದು ಕೊಲೆ ಎಂದು ಆರೋಪಿಸಿದ್ದು, ಸಂಘಟನೆಯ ಪುನೀತ್ ಕೆರೆಹಳ್ಳಿ ಬ್ಯಾಟ್ನಿಂದ ಹಲ್ಲೆ ಮಾಡಿದ್ದಾರೆ. ನನ್ನ ಮಗನ ಸಾವಿಗೆ ಇವರೇ ಕಾರಣ ಎಂದು ಪ್ರತ್ಯೇಕ ದೂರು ನೀಡಿದ್ದಾರೆ.












