ತ್ರಿಪುರಾ | ವಿಧಾನಸಭೆಯಲ್ಲಿ ನೀಲಿಚಿತ್ರ ವೀಕ್ಷಿಸಿ ಸಿಕ್ಕಿಬಿದ್ದ ಬಿಜೆಪಿಯ ಶಾಸಕ; ವೀಡಿಯೊ ವೈರಲ್

0
277

ಸನ್ಮಾರ್ಗ ನ್ಯೂಸ್

ತ್ರಿಪುರಾ : ವಿಧಾನಸಭೆ ಅಧಿವೇಶನ ನಡೆಯುತ್ತಿರುವ ವೇಳೆಯಲ್ಲೇ ತ್ರಿಪುರಾದ ಬಿಜೆಪಿ ಶಾಸಕನೋರ್ವ ನೀಲಿಚಿತ್ರ (ಪೋರ್ನ್‌) ವೀಕ್ಷಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ತ್ರಿಪುರ ರಾಜ್ಯ ವಿಧಾನಸಭೆಯ ಅಧಿವೇಶನದ ವೇಳೆ ಗುರುವಾರ, ಬಾಗ್‌ಬಾಸಾ ಕ್ಷೇತ್ರದ ಬಿಜೆಪಿ ಶಾಸಕ ಜದಾಬ್ ಲಾಲ್ ನಾಥ್, ಪೋರ್ನ್ ವೀಕ್ಷಣೆಯಲ್ಲಿ ತೊಡಗಿದ್ದರು. ಇದನ್ನ ಗಮನಿಸಿದ ಗ್ಯಾಲರಿಯಲ್ಲಿ ಕುಳಿತಿದ್ದವರು ತಮ್ಮ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಧಾನಸಭೆ ಕಲಾಪದ ನಡುವೆಯೇ ತಮ್ಮ ಮೊಬೈಲ್‌ನಲ್ಲಿ ಆಶ್ಲೀಲ ವಿಡಿಯೋ ವೀಕ್ಷಣೆಯಲ್ಲಿ ಮುಳುಗಿದ್ದ ಜದಾಬ್ ಲಾಲ್ ನಾಥ್, ಹಲವು ವಿಡಿಯೋಗಳನ್ನು ಸ್ಕ್ರಾಲ್ ಮಾಡುತ್ತಿರುವುದು ಮತ್ತು ಇದೇ ವೇಳೆ ಸ್ಪೀಕರ್ ಬಿಸ್ವಾ ಬಂಧು ಸೇನ್ ಕಲಾಪವನ್ನು ನಿಯಂತ್ರಿಸುವ ಮಾತುಗಳು ವೈರಲ್‌ ವಿಡಿಯೋದಲ್ಲಿದೆ.

ಬಿಜೆಪಿ ಶಾಸಕನ ಕೃತ್ಯಕ್ಕೆ ತರಹಾವೇರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದೊಂದು ನಾಚಿಕೆಗೇಡಿನ ಸಂಗತಿ ಎಂದು ನೆಟ್ಟಿಗರು ಉಗಿದಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ, ಶಾಸಕ ಜದಾಬ್ ಲಾಲ್ ನಾಥ್‌ಗೆ ಶೋಕಾಸ್‌ ನೋಟಿಸ್‌ ನೀಡಿದೆ. ಉತ್ತರ ತ್ರಿಪುರಾ ಜಿಲ್ಲೆಯ ಬಾಗ್‌ಬಾಸಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜದಾಬ್ ಲಾಲ್ ನಾಥ್, ಸಿಪಿಐಎಂನ ಬಿಜಿತಾ ನಾಥ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.