ಸನ್ಮಾರ್ಗ ವಾರ್ತೆ
ಇಂಫಾಲ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರನ್ನು ಭೇಟಿ ಮಾಡಿ ಮಣಿಪುರ ಹಿಂಸಾಚಾರದ ಕುರಿತು ಚರ್ಚಿಸಿದರು. ಇದೇ ವೇಳೆ ಹಿಂಸಾಚಾರವು ಪರಿಹಾರವಲ್ಲ, ಶಾಂತಿಯನ್ನು ಕಾಪಾಡುವಂತೆ ಎಲ್ಲ ವಿಭಾಗದ ಜನತೆಯಲ್ಲಿ ರಾಹುಲ್ ಗಾಂಧಿ ಮನವಿ ಮಾಡಿದರು.
ರಾಜ್ಯಪಾಲರ ಭೇಟಿಯ ಬಳಿಕ ರಾಜ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿಯು ಮುಂದಿನ ದಾರಿಯಾಗಿದೆ. ಪ್ರತಿಯೊಬ್ಬರೂ ಈಗ ಶಾಂತಿಯ ಕುರಿತು ಮಾತನಾಡಬೇಕು ಮತ್ತು ಆ ನಿಟ್ಟಿನಲ್ಲಿ ಮುನ್ನಡೆಯಬೇಕು. ಮಣಿಪುರದಲ್ಲಿ ಶಾಂತಿಯನ್ನು ಸ್ಥಾಪಿಸಲು ಯಾವುದೇ ರೀತಿಯ ನೆರವಿಗೆ ನಾನು ಸಿದ್ದನಿದ್ದೇನೆ’ ಎಂದು ಹೇಳಿದರು.
‘ಮಣಿಪುರದ ಜನತೆಯ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಇದು ಭೀಕರ ದುರಂತವಾಗಿದೆ. ಇದು ಮಣಿಪುರ ಮತ್ತು ಭಾರತದ ಜನತೆಗೆ ಅತ್ಯಂತ ದುಃಖ ಮತ್ತು ನೋವಿನ ವಿಷಯವಾಗಿದೆ ‘ ಎಂದವರು ಹೇಳಿದ್ದಾರೆ.
ರಾಹುಲ್ ಇಂಫಾಲ, ಚುರಾಚಂದ್ರಪುರ ಮತ್ತು ಮೊಯಿರಂಗ್ ನಲ್ಲಿಯ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಎಲ್ಲ ಸಮುದಾಯಗಳ ಜನರೊಂದಿಗೆ ಮಾತುಕತೆಗಳನ್ನು ನಡೆಸಿದ್ದರು. ಪರಿಹಾರ ಶಿಬಿರಗಳಲ್ಲಿಯ ಮೂಲ ಸೌಕರ್ಯಗಳು ಮತ್ತು ಆಹಾರದಲ್ಲಿ ಸುಧಾರಣೆ, ಔಷಧಿಗಳ ಪೂರೈಕೆ ಮಾಡಬೇಕಾಗಿದೆ. ಶಿಬಿರದಲ್ಲಿ ಈ ಕುರಿತು ದೂರುಗಳು ಕೇಳಿ ಬಂದಿವೆ ಎಂದು ರಾಹುಲ್ ಹೇಳಿದರು. ಇದೇ ಸಂದರ್ಭದಲ್ಲಿ ರಾಹುಲ್ ಮಣಿಪುರದ ವಿವಿಧ ನಾಗರಿಕ ಸಂಘಟನೆಗಳ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.












