ಎಲ್ಲಾ ಧರ್ಮವನ್ನು ಒಂದಾಗಿ ಕಾಣುವ ಹೃದಯ ವೈಶಾಲ್ಯತೆಯುಳ್ಳವರಾಗಿದ್ದರು-ಅಶೋಕ್ ಕುಮಾರ್ ರೈ
ಸನ್ಮಾರ್ಗ ವಾರ್ತೆ
ಉಪ್ಪಿನಂಗಡಿ: ದಿವಂಗತ ಹಾಜಿ ಮುಸ್ತಫಾ ಕೆಂಪಿ ಎಲ್ಲಾ ಧರ್ಮವನ್ನು ಒಂದಾಗಿ ಕಾಣುವ ಹೃದಯ ವೈಶಾಲ್ಯತೆಯುಳ್ಳವರಾಗಿದ್ದರು. ಅವರು ಸಮಾಜಕ್ಕಾಗಿ ಬದುಕಿದ ವ್ಯಕ್ತಿ. ಆದ್ದರಿಂದ ಈ ಸಮಾಜದಿಂದ ಅವರು ಅಗಲಿದರೂ, ಅವರಿಗೆ ಇಷ್ಟೊಂದು ಜನರ ಪ್ರೀತಿ ಸಿಗುವಂತಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಶುಕ್ರವಾರ ಉಪ್ಪಿನಂಗಡಿ ನಾಗರಿಕರ ಪರವಾಗಿ ಇಲ್ಲಿನ ಎಚ್.ಎಂ. ಅಡಿಟೋರಿಯಂನಲ್ಲಿ ನಡೆದ ಹುಟ್ಟೂರ ಸಂತಾಪ ಸಭೆಯಲ್ಲಿ ನುಡಿನಮನ ಅರ್ಪಿಸಿ ಮಾತನಾಡಿ ಮುಸ್ತಾಫ ಕೆಂಪಿ ನನಗೆ ಪರಿಚಯ ಮೂರು ತಿಂಗಳ ಹಿಂದೆಯಷ್ಟೇ ಆಗಿದೆ. ಆದರೆ ಬಳಿಕ ನಿರಂತರ ಸಂಪರ್ಕದಲ್ಲಿದ್ದೆವು. ನಾನು ಚುನಾವಣೆಗೆ ನಿಂತ ಸಂದರ್ಭ ರಾಜಕೀಯ, ಪಕ್ಷ ಸಂಘಟನೆಗಳಿಗಾಗಿ ಹಲವಾರು ಮಾರ್ಗದರ್ಶನವನ್ನು ಕೊಟ್ಟಿದ್ದಾರೆ. ಅವರ ಕಾರ್ಯವೈಖರಿ, ಚಿಂತನೆಗಳನ್ನು ತಿಳಿದಾಗ ಅವರಲ್ಲಿರುವ ಉತ್ತಮ ಗುಣಗಳು ಅರ್ಥವಾಯಿತು. ಅವರು ಅವರ
ಸಮುದಾಯವನ್ನು ಮಾತ್ರ ಪ್ರೀತಿಸದೇ, ಎಲ್ಲಾ ಸಮುದಾಯಗಳು ಸಾಮರಸ್ಯದಿಂದಿರಬೇಕು ಎಂದು ಕನಸು ಕಂಡವರಾಗಿದ್ದರು. ನಮ್ಮ ಜೀವಿತಾವಧಿಯಲ್ಲಿ ಸಮಾಜಮುಖಿ ಕೆಲಸಗಳೊಂದಿಗೆ ಸಮಾಜದ ನೋವಿಗೆ ಸ್ಪಂದಿಸಿದಾಗ ಮಾತ್ರ ಜನರ ಪ್ರೀತಿ ಗಳಿಸಲು ಸಾಧ್ಯ ಎಂದ ಅವರು ಕೆಲವು ದಿನಗಳ ಹಿಂದೆ ಉಪ್ಪಿನಂಗಡಿ ಮಾಲಿಕ್ ದೀನಾರ್ ಮಸೀದಿಯ ಹಿಂದುಗಡೆ ನದಿಗೆ ತಡೆಗೋಡೆಗೆ ಅನುದಾನ ನೀಡಬೇಕೆಂದು ಮನವಿ ಮಾಡಿದ್ದರು. ಅದನ್ನು ಖಂಡಿತಾ ದೊರಕಿಸಿಕೊಡುವುದಾಗಿ ತಿಳಿಸಿದರು.
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿ ಎಲ್ಲರ ಒಡನಾಡಿಯಾಗಿ ಎಲ್ಲರ ಪ್ರೀತಿ ಗಳಿಸಿದ್ದ ಹಾಜಿ ಮುಸ್ತಫಾ ಕೆಂಪಿಯವರ ಮರಣ ಉಪ್ಪಿನಂಗಡಿಗೆ ಬಂದೊದಗಿದ ದುರಂತ. ಇವರು ಮುಸ್ಲಿಂ ಸಮುದಾಯದವರಾಗಿದ್ದರೂ ಎಲ್ಲಾ ಸಮುದಾಯಕ್ಕೂ ನ್ಯಾಯ ಕೊಡುವವರಂತಾಗಿದ್ದರು. ಅವರ ಸಮುದಾಯದವನದ್ದು ತಪ್ಪು ಎಂದಾದರೆ ಅವರು ಅದನ್ನು ಎಂದಿಗೂ ಸಮರ್ಥಿಸದ ಗುಣ ಅವರದ್ದಾಗಿತ್ತು ಎಂದರು.
ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಸುಬ್ಬಪ್ಪ ಕೈಕಂಬ ಮಾತನಾಡಿ ಮುಸ್ತಫಾ ಅವರು ದೈಹಿಕವಾಗಿ ನಮ್ಮ ಬಳಿ ಇರದಿದ್ದರೂ, ನೆನಪಾಗಿ
ಮನಸ್ಸಲ್ಲಿ ಎಂದಿಗೂ ಇರುತ್ತಾರೆ. ಎಲ್ಲಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದ ಇವರಿಗೆ ಸಾಹಿತ್ಯದ ಬಗ್ಗೆಯೂ ಉತ್ತಮ ಒಲವು, ಜ್ಞಾನವನ್ನು ಹೊಂದಿದ್ದರು ಎಂದರು.
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ನಿವೃತ್ತ ಶಿಕ್ಷಕ ವಿನ್ಸೆಂಟ್ ಫೆರ್ನಾಂಡೀಸ್, ಉಪ್ಪಿನಂಗಡಿ ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷ ಅಜೀಜ್ ಬಸ್ತಿಕ್ಕಾರ್, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಶಾಂತಿ ಪ್ರಕಾಶನದ ಮುಹಮ್ಮದ್ ಕುಂಞಿ, ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ, ವೈದ್ಯರಾದ ಡಾ. ನಿರಂಜನ್ ರೈ, ಚಲನಚಿತ್ರ ನಟ ಎಂ.ಕೆ. ಮಠ, ಇಂಡಿಯನ್ ಸ್ಕೂಲ್ನ ಪ್ರಾಚಾರ್ಯೆ ಸಂಶಾದ್, ಕರುವೇಲ್ ಮಸೀದಿ ಖತೀಬ್ ಅನಸ್ ಹಾದಿ ತಂಙಳ್, ಎಸ್.ಬಿ. ದಾರಿಮಿ, ಉದಯಕುಮಾರ್ ಯು.ಎಲ್., ಉಲ್ಲಾಸ್ ಕೋಟ್ಯಾನ್, ನಝೀರ್ ಮಠ, ರಶೀದ್ ಹಾಜಿ ಶುಕ್ರಿಯಾ, ಅಬೀಬ್ ರಹಿಮಾನ್, ಇಬ್ರಾಹಿಂ ಮಾತನಾಡಿದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ರಾಧಾಕೃಷ್ಣ ನಾಯಕ್, ಎ. ಕೃಷ್ಣ ರಾವ್ ಅರ್ತಿಲ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೈ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಪ್ರವೀಣ್ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, 34-ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿ’ಕೋಸ್ತ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮನಾಥ, ಅಶ್ರಫ್ ಬಸ್ತಿಕ್ಕಾರ್, ಯೂಸುಫ್ ಪೆದಮಲೆ, ಉದ್ಯಮಿಗಳಾದ ಯು. ರಾಮ, ಶಿವಪ್ರಸಾದ್, ಹೆಚ್. ಯೂಸುಫ್ ಹಾಜಿ, ಐ. ಅಶ್ರಫ್ ಮೈಸೂರ್, ಯು.ಟಿ. ತೌಸೀಫ್, ಶಬ್ಬೀರ್ ಕೆಂಪಿ, ಸಿದ್ದಿಕ್ ಕೆಂಪಿ ಇದ್ದರು. ಜಲೀಲ್ ಮುಕ್ರಿ ನಿರೂಪಿಸಿದರು.














