ಸಮಾನ ಸಿವಿಲ್ ಕೋಡ್: ಬಿಜೆಪಿ ಮಿತ್ರ ಪಕ್ಷದಿಂದ ಅಪಸ್ವರ

0
479

ಸನ್ಮಾರ್ಗ ವಾರ್ತೆ

ಶಿಲ್ಲಾಂಗ್, ಜು.1: ಸಮಾನ ಸಿವಿಲ್ ಕೋಡ್ ಜಾರಿಗೆ ಕಠಿಣ ಪ್ರಯತ್ನ ನಡೆಸುತ್ತಿರುವ ಬಿಜೆಪಿಗೆ ಬಿಜೆಪಿ ಸಖ್ಯ ಪಕ್ಷಗಳಿಂದ  ತಿರುಗೇಟು ಬಿದ್ದಿದೆ. ಸಮಾನ ಸಿವಿಲ್ ಕೋಡ್ ಇಂಡಿಯ ಎಂಬ ತಳಹದಿಯನ್ನೇ ನಾವು ಒಪ್ಪುವುದಿಲ್ಲ ವಿರೋಧಿಸುತ್ತೇವೆ ಎಂದು ಮೇಘಾಲದಯದ ಬಿಜೆಪಿಯ ಸಖ್ಯ ಪಕ್ಷ ನ್ಯಾಶನಲ್ ಪೀಪಲ್ಸ್ ಪಾರ್ಟಿ ಎನ್‍ಪಿಪಿ ಅಧ್ಯಕ್ಷ ಮೇಘಾಲಯ ಮುಖ್ಯಮಂತ್ರಿ ಕೊನರಾಡ್ ಕೆ ಸಂಗ್ಮಾ ಬಹಿರಂಗವಾಗಿ ಹೇಳಿದ್ದಾರೆ.

ಮೇಘಾಲಯ ಸರಕಾರ ಎನ್‍ಪಿಪಿ ಕೈಯಲ್ಲಿದೆ. ಮಣಿಪುರದಲ್ಲಿ ಬಿಜೆಪಿ ಸರಕಾರವನ್ನು  ಎನ್‍ಪಿಪಿ ಬೆಂಬಲಿಸುತ್ತಿದೆ. ವಿವಿಧತೆಯಲ್ಲಿ ಏಕತೆ ಭಾರತದ ವಿಶೇಷತೆಯಾಗಿದ್ದು ಈ ಏಕರೂಪದ ನಾಗರಿಕ ಸಂಹಿತೆ ಈ ಆಶಯಕ್ಕೆ ತದ್ವಿರುದ್ಧವಾಗಿದೆ. ನಮ್ಮ ದೇಶ ವಿವಿಧತೆಯನ್ನು ಹೊಂದಿರುವ ದೇಶ. ವೈವಿಧ್ಯತೆ ನಮ್ಮ ಶಕ್ತಿಯಾಗಿದೆ ಎಂದು ಕೊನರಾಡ್ ಸಂಗ್ಮ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುವ ಮೂಲಕ ಬಿಜೆಪಿಯ ಸಮಾನ ಸಿವಿಲ್ ಕೋಡ್ ತರುವ ಯತ್ನ ತಣ್ಣೀರೆರಚಿದರು. ಈ ಕಾನೂನಿನ ಕರಡು ವರದಿ ಕೈಗೆ ಸಿಕ್ಕಿಲ್ಲ ಅದು ಸಿಕ್ಕಿದ ಮೇಲೆ ಈ ಕುರಿತು ಹೆಚ್ಚಿನ ಮಾತಾಡುತ್ತೇನೆ ಎಂದೂ ಅವರು ಹೇಳಿದರು.

ನಾವು ಎನ್‍ಪಿಪಿಯ ದೃಷ್ಟಿಕೋನವನ್ನು ರಕ್ಷಿಸಬೇಕು. ನಮ್ಮ ಶಕ್ತಿ ಮತ್ತು ಸಂಸ್ಕೃತಿಯನ್ನು ಬದಲಿಸಲು ಸಾಧ್ಯವಿಲ್ಲ. ಈಶಾನ್ಯ ರಾಜ್ಯಗಳ ಎಲ್ಲ ಸಮುದಾಯಗಳಿಗೆ ಅವರದೇ ಸಂಪ್ರದಾಯ ಇದೆ ಎಂದು ನಾವು ಒಂದು ರಾಜಕೀಯ ಪಕ್ಷ ಆಗಿದ್ದು ಅರ್ಥ ಮಾಡಿಕೊಂಡಿದ್ದೇವೆ. ಅದು ಅಸ್ತಿತ್ವದಲ್ಲಿ ಉಳಿಯಬೇಕೆಂದು ನಾವು ಬಯಸುತ್ತೇವೆ. ಅದರಲ್ಲಿ ಹಸ್ತಕ್ಷೇಪವನ್ನು ಬಯಸುವುದಿಲ್ಲ. ವೈವಿಧ್ಯತೆ ನಮ್ಮ ಶಕ್ತಿ ಮತ್ತು ಅಸ್ಮಿತೆಯಾಗಿದೆ. ಈ ಸತ್ಯಕ್ಕೆ ವಿರುದ್ಧವಾಗಿದೆ ಸಮಾನ ಸಿವಿಲ್ ಕೋಡ್ ಎಂದು  ಅವರು ಹೇಳಿದರು.

ಈ ನಡುವೆ ಸಮಾನ ಸಿವಿಲ್ ಕೋಡ್ ಕುರಿತು ಪುನಃ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಕಾನೂನು ಆಯೋಗ ಹೊರಟಿದ್ದು ಕಾನೂನು ಆಯೋಗದ ಕ್ರಮದ ಕುರಿತು ಕಾನೂನು -ಪರ್ಸನಲ್ ವಿಷಯಗಳ ಸ್ಥಾಯಿ ಸಮಿತಿಯಿಂದ ವಿವರಗಳನ್ನು ಪಡೆಯಲು ಅದು ಬಯಸಿದೆ. ಈ ಕುರಿತು  ಸೋಮವಾರ ಸಮಿತಿಯ ಸಭೆ ನಡೆಯಲಿದ್ದು ಸಭೆಯಲ್ಲಿ ಕಾನೂನು ಆಯೋಗದ ಪ್ರತಿನಿಧಿಗಳು ಹಾಜರಾಗಬೇಕೆಂದು ಸೂಚಿಸಲಾಗಿದೆ. ಕಾನೂನು ಸಚಿವಾಲಯದ ಕಾನೂನು ನಿರ್ಮಾಣ ವಿಭಾಗದ ಪ್ರತಿನಿಧಿಗಳನ್ನೂ ಸಭೆಗೆ ಆಹ್ವಾನಿಸಲಾಗಿದೆ.

ಇದೇ ವೇಳೆ ಸಮಾನ ಸಿವಿಲ್ ಕೋಡ್ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ಮಂಡಿಸಲು ಮೋದಿ ಸರಕಾರ ಅವಸರಿಸುತ್ತಿದೆ ಎಂಬ ಸೂಚನೆಗಳು ಲಭ್ಯವಾಗಿದ್ದು ಈ ತಿಂಗಳು ಹದಿನಾಲ್ಕನೇ ತಾರೀಕಿನವರೆಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ನಡೆಯಲಿದೆ ಎಂದು ವರದಿ ತಿಳಿಸಿದೆ.

ಈಗಾಗಲೇ ಎಂಟೂವರೆ ಲಕ್ಷ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದು ಬಲವಾದ ವಿರೋಧ ಕೂಡ ಸಮಾನ ನಾಗರಿಕ ಕಾನೂನು ವಿರುದ್ಧ ಕೇಳಿ ಬರುತ್ತಿದೆ. ಇದೇವೇಳೆ ಬಿಜೆಪಿಯ ಸಖ್ಯ ಪಕ್ಷ ಅಪಸ್ವರ ಎತ್ತಿರುವುದು ಕೇಂದ್ರ ಸರಕಾರ ಹೇಗೆ ಪರಿಗಣಿಸುತ್ತದೆ ಎನ್ನುವ ಕುತೂಲಹಲವೂ ಸೃಷ್ಟಿಯಾಗಿದೆ.