ಸನ್ಮಾರ್ಗ ವಾರ್ತೆ
ಲಕ್ನೊ, ಜು. 14: ಟೊಮೆಟೊ ಇತ್ತೀಚೆಗೆ ಸ್ಟಾರ್ ಗಿರಿ ಗಿಟ್ಟಿಸಿಕೊಂಡಿದೆ. ಟೊಮೊಟೊ ಉಡುಗೊರೆ ಕೊಟ್ಟು ಮೊಬೈಲ್ ಮಾರಾಟ ನಡೆಸಿದ ವ್ಯಾಪಾರಿಗಳು ಇದ್ದಾರೆ. ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಮಾರ್ಕೆಟಿನಲ್ಲಿ ಎರಡು ಅಂಗಡಿಗಳಿಂದ 26 ಕಿಲೊ ಟೊಮೆಟೊ 25 ಕಿಲೊ ಮೆಣಸು, ಎಂಟು ಕೆಜಿ ಶುಂಠಿ ಕಳ್ಳತನವಾಗಿದ್ದು ಆಶ್ಚರ್ಯ ಚಕಿತಗೊಳಿಸಿದೆ.
ಕಳೆದ ಸೋಮವಾರ ಬೆಳಗ್ಗೆ ತರಕಾರಿ ಅಂಗಡಿ ಮಾಲಿಕರಾದ ರಾಮ್ಜಿ ಮತ್ತು ನಯೀಂ ಖಾನ್ ಅಂಗಡಿ ತೆರೆದಾಗ ಟೊಮೆಟೊ , ಶುಂಠಿ, ಮೆಣಸು ಕಳ್ಳತನವಾದದ್ದು ಗೊತ್ತಾಗಿದೆ. ನಂತರ ಇಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಕಂತ ಪ್ರಸಾದ್ ಮತ್ತು ಮುಹಮ್ಮದ್ ಇಸ್ಲಾಂ ಎಂಬಿಬ್ಬರನ್ನು ಬಂಧಿಸಿದ್ದಾರೆ.
ಇದೇ ವೇಳೆ ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ರು ರಾಜ್ಯದಲ್ಲಿ ಟೊಮೆಟೊ ಕಳ್ಳರನ್ನು ಹಿಡಿಯಲು ಪೊಲೀಸರು ಟಾಸ್ಕ್ ಪೋರ್ಸ್ ರಚಿಸಬೇಕೆಂದು ಸಲಹೆ ನೀಡಿದ್ದು ಸ್ಪೆಷಲ್ ಟೊಮೆಟೊ ಪೋರ್ಸ್ ಎಂದು ಹೆಸರಿಸಿದರೆ ಚೆನ್ನ ಎಂದು ಅವರು ವ್ಯಂಗವಾಡಿದ್ದಾರೆ.
ತರಕಾರಿ ಜನಸಾಮಾನ್ಯರನ್ನು ಹೇಗೆ ಕಾಡುತ್ತಿದೆ ಎಂಬುದಕ್ಕೆ ಟೊಮೆಟೊ ಕಳ್ಳತನ ಘಟನೆಯನ್ನು ಉದಾಹರಣೆ ನೀಡಲಾಗುತ್ತಿದೆ. ಟೊಮೆಟೊ ಶುಂಠಿಯ ದರಗಳು 100, 200ರೂಪಾಯಿ ದಾಟಿದೆ. ಟೊಮೆಟೊ, ಸಹಿತ ತರಕಾರಿಗೆ ವಿಶೇಷ ಸುರಕ್ಷೆ ಕಲ್ಪಿಸಬೇಕಾದ ಪರಿಸ್ಥಿತಿ ನೆಲೆಸಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.












