ಹೊಸದಿಲ್ಲಿ,ಮಾ.24: ಪುಲ್ವಾಮ ಭಯೋತ್ಪಾದನಾ ದಾಳಿಯ ವೇಳೆ ಪ್ರಧಾನಿ ಬೀಫ್ ಬಿರಿಯಾನಿ ತಿಂದು ನಿದ್ದೆ ಮಾಡುತ್ತಿದ್ದರೇ ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ ನಾಯಕ ಅಸದುದ್ದೀನ್ ಉವೈಸಿ ಕಟುವಾಗಿ ಟೀಕಿಸಿದ್ದಾರೆ.
ಬಾಲಕೋಟಿನಲ್ಲಿ ವಾಯುದಾಳಿಯಲ್ಲಿ 250 ಭಯೋತ್ಪಾದಕರು ಸತ್ತರೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳುತ್ತಾರೆ. ಘಟನಾ ಸ್ಥಳದಲ್ಲಿ 300 ಮೊಬೈಲ್ ಫೋನ್ಗಳು ಸಿಕ್ಕಿವೆ ಎಂದು ಗೃಹ ಸಚಿವ ರಾಜ್ನಾಥ್ ಸಿಂಗ್ ಹೇಳುತ್ತಾರೆ ಎಂದ ಉವೈಸಿ, ನಿಮಗೆ ಪಾಕಿಸ್ತಾನದ ಬಾಲಕೋಟ್ನಿಂದ 300 ಮೊಬೈಲ್ ಹುಡುಕಿ ತೆಗೆಯಲು ಸಾಧ್ಯವಾಗುತ್ತದೆಯೆಂದಾದರೆ. ನಿಮ್ಮ ಮೂಗಿನ ಕೆಳಗಿರುವ ಪುಲ್ವಾಮದಲ್ಲಿ ಸಾಗಿಸಲಾದ 250 ಕೆಜಿಯಷ್ಟು ಆರ್ಡಿಎಕ್ಸ್ ಅನ್ನು ಪತ್ತೆ ಹಚ್ಚಲು ಯಾಕೆ ಸಾಧ್ಯವಾಗಲಿಲ್ಲ ಎಂದು ಉವೈಸಿ ಸರಕಾರವನ್ನು ಪ್ರಶ್ನಿಸಿದರು. ಹಾಗಿದ್ದರೆ ಆ ಸಮಯದಲ್ಲಿ ನೀವು ಬೀಫ್ ಬಿರಿಯಾನಿ ತಿಂದು ಗಡದ್ದಾಗಿ ನಿದ್ದೆ ಮಾಡುತ್ತಿದ್ದಿರೋ? ಎಂದು ಪ್ರಧಾನಿ ಮತ್ತು ಗೃಹ ಸಚಿವರನ್ನು ಪ್ರಶ್ನಿಸುತ್ತೇನೆ ಎಂದು ಉವೈಸಿ ಟೀಕಿಸಿದರು.
ದೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿವೆ ಎಂದು ಯಾರಾದರೂ ಹೇಳಿದರೆ ನಾನು ವಿರೋಧಿಸುತ್ತೇನೆ. ಯಾಕೆಂದರೆ ಒಂದು ರಾಷ್ಟ್ರೀಯ ಪಾರ್ಟಿ ಬಿಜೆಪಿಯಾಗಿದೆ. ಇನ್ನೊಂದು 1.5 ಬಿಜೆಪಿಯಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಉವೈಸಿ ಹೇಳಿದರು. ಹೈದರಾಬಾದಿನಿಂದ ಲೋಕಸಭೆಗೆ ಉವೈಸಿ ಚುನಾವಣೆಗೆ ನಿಂತಿದ್ದಾರೆ. ದೇಶದ ಜಾತ್ಯತೀತೆ, ಸೌಹಾರ್ದ ಇಲ್ಲದಾಗಿಸಲು ಯತ್ನಿಸುವವರ ವಿರುದ್ಧ ನನ್ನ ಸ್ಪರ್ಧೆ ಎಂದು ಉವೈಸಿ ಹೇಳಿದರು.












