ಲಕ್ನೊ,ಮಾ. 25: ಉತ್ತರಪ್ರದೇಶದ ಸೋನ್ಭದ್ರ ಜಿಲ್ಲೆಯ ಪರ್ಸೋಯ್ ಗ್ರಾಮದಲ್ಲಿ ಅರುವತ್ತು ವರ್ಷದ ಮುಹಮ್ಮದ್ ಅನ್ವರ್ ಎಂಬನಿಗೆ ಹೊಡೆದು ಕೊಲೆ ಮಾಡಲಾಗಿದೆ. ಮುಹರಂಗಾಗಿ ಕಟ್ಟಲಾದ ಕಾಂಕ್ರಿಟ್ ವೇದಿಕೆಯ ಕುರಿತ ವಿವಾದದಲ್ಲಿ ಬುಧವಾರ ರಾತ್ರೆ ಜನರ ಗುಂಪು ವೃದ್ಧನನಿಗೆ ಹಲ್ಲೆ ನಡೆಸಿ ಕೊಂದು ಹಾಕಿದೆ.
ಊರಿನ ಒಂದು ಗುಂಪು ಕಾಂಕ್ರಿಟ್ ವೇದಿಕೆಯನ್ನು ಕೆಡವಲು ಬಂದಿತ್ತು. ಅದನ್ನು ತಡೆಯಲು ಯತ್ನಿಸಿದ ಅನ್ವರ್ರರನ್ನು ಹದಿನಾಲ್ಕು ಮಂದಿ ಸೇರಿ ಮಾರಾಣಾಂತಿಕವಾಗಿ ಹೊಡೆದು ಸಾಯಿಸಿ ಹಾಕಿದ್ದಾರೆ. ಸ್ಕೂಲ್ ಅಧ್ಯಾಪಕ ರವೀಂದ್ರ ಖರ್ವಾರ್ ಎಂಬಾತನನ್ನು ಮುಖ್ಯ ಆರೋಪಿಯನ್ನಾಗಿಸಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಆರೋಪಿಗಳಲ್ಲಿ ಹನ್ನೊಂದು ಮಂದಿ ಅಪ್ರಾಪ್ತ ವಯಸ್ಸಿನವರು.
ಆರು ತಿಂಗಳ ಹಿಂದೆ ರವೀಂದ್ರ ಖರ್ವಾರ್ ಎಂಬ ಅಧ್ಯಾಪಕ ಸರಕಾರಿ ಜೂನಿಯರ್ ಕಾಲೇಜಿಗೆ ಬರುವವರೆಗೆ ಊರಿನಲ್ಲಿ ವೇದಿಕೆ ಸಂಬಂಧಿಸಿದ ಯಾವುದೇ ವಿವಾದ ಇರಲಿಲ್ಲ ಎಂದು ಮೃತ ಅನ್ವರ್ರ ಹಿರಿಯ ಸಹೋದರ ನಯೀಂ ಗಾಝಿಪ್ಪುರಿ ಹೇಳಿದ್ದಾರೆ. ಮುಹರಂ ವೇಳೆ ಉಪಯೋಗಿಸುತ್ತಿದ್ದ ವೇದಿಕೆಯನ್ನು 2007ರಲ್ಲಿ ಕಟ್ಟಿಸಲಾಗಿತ್ತು. ಮುಹರ್ರಂ ಕಾರ್ಯಕ್ರಮದಲ್ಲಿ ಊರಿನ ಎಲ್ಲ ಜಾತಿಯವರು ಸೇರಿ ಆಚರಿಸುತ್ತಿದ್ದರು. ಆದರೆ ಅಧ್ಯಾಪಕ ಗ್ರಾಮಕ್ಕೆ ಬಂದ ನಂತರ ಕೆಲವರನ್ನು ಪ್ರಚೋದಿಸಿ ವೇದಿಕೆ ಕೆಡವಿದ್ದ. ಆದರೆ ನಂತರ ಊರಿನವರು ಒಟ್ಟು ಗೂಡಿ ವೇದಿಕೆಯನ್ನು ಪುನಃ ಕಟ್ಟಿಸಿದ್ದರು. ಮತ್ತೆ ಇದೇ ವೇದಿಕೆಯನ್ನು ಕೆಡವಲು ಗುಂಪು ಸೇರಿಸಿಕೊಂಡು ಅಧ್ಯಾಪಕ ಬಂದಿದ್ದನೆನ್ನಲಾಗಿದೆ.












