ಕಾಂಗ್ರೆಸ್- ಆಮ್ ಆದ್ಮಿ ಸಖ್ಯ ವಿಚಾರ: ಈಗ ಚೆಂಡು ರಾಹುಲ್ ಗಾಂಧಿ ಅಂಗಳದಲ್ಲಿ

0
717

ಹೊಸದಿಲ್ಲಿ,ಮಾ.26: ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯೊಂದಿಗೆ ಸಖ್ಯದಲ್ಲೇರ್ಪಡುವ ವಿಚಾರದಲ್ಲಿ ಅಂತಿಮ
ತೀರ್ಮಾನ ದಿಲ್ಲಿ ಪ್ರದೇಶ ಸಮಿತಿ (ಡಿಪಿಸಿಸಿ) ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೆ ವಿವೇಚನೆಗೆ ಬಿಟ್ಟುಕೊಟ್ಟಿದೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಬೇರೆ ಬೇರೆ ಸ್ಪರ್ಧಿಸಿದರೆ ಎಲ್ಲ ಲೋಕ ಸಭಾ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿವೆ ಎನ್ನುವ ಪರಿಸ್ಥಿತಿ ನೆಲೆಸಿರುವುದರಿಂದ ಪುನಃ ಸಖ್ಯ ಮಾಡಿಕೊಳ್ಳುವ ವಿಚಾರ ಮುನ್ನೆಲೆಗೆ ಬಂದಿದೆ.

ಆದರೆ ದಿಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಆಮ್ ಆದ್ಮಿಯೊಂದಿಗೆ ಸಖ್ಯ ಮಾಡಿಕೊಳ್ಳುವ ವಿಚಾರದಲ್ಲಿ ಅಸಮಾಧನವಿದೆ. ಈ ಹಿಂದೆಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್, ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಸಖ್ಯಕ್ಕಾಗಿ ಮಧ್ಯಸ್ಥಿಕೆ ವಹಿಸಿದರೂ ಮೈತ್ರಿಗೆ ಪಿಸಿಸಿ ಅಧ್ಯಕ್ಷೆ ಶೀಲಾ ದೀಕ್ಷಿತ್ ಹಟ ಹಿಡಿದಿದ್ದರು. ಶೀಲಾ ದೀಕ್ಷಿತ್‍ರನ್ನು ಹೊರತು ಪಡಿಸಿ ಮಾಜಿ ಪಿಸಿಸಿ ಅಧ್ಯಕ್ಷರು ಮತ್ತು ದಿಲ್ಲಿಯ ಹೊಣೆಗಾರಿಕೆಯಿರುವ ಎಐಸಿಸಿ ಕಾರ್ಯದರ್ಶಿ ಪಿ.ಸಿ. ಚಾಕೊ ಮುಂತಾದವರು ಸಖ್ಯದ ಪರವಹಿಸಿದ್ದರು.

ಆಮ್‍ಆದ್ಮಿ ಪಾರ್ಟಿಯೊಂದಿಗಿನ ಸಖ್ಯದ ಕುರಿತು ರಾಹುಲ್ ಮಂಗಳವಾರ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ. ಸೋಮವಾರ ರಾಜ್ಯದ ನಾಯಕರೊಂದಿಗೆ ಅವರು ಸಮಾಲೋಚನೆ ನಡೆಸಿದ್ದಾರೆ. ಹಲವು ಬಾರಿ ಕಾಂಗ್ರೆಸನ್ನು ಸಂಪರ್ಕಿಸಿದರೂ ಮೈತ್ರಿ ವಿಚಾರದಲ್ಲಿ ತೀರ್ಮಾನ ವಿಳಂಬಗೊಂಡದ್ದರಿಂದ ದಿಲ್ಲಿಯ ಎಲ್ಲ ಸೀಟುಗಳಿಗೆ ಆಮ್ ಆದ್ಮಿಪಾರ್ಟಿ ತನ್ನ ಆಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿ ಪ್ರಚಾರವನ್ನೂ ಆರಂಭಿಸಿದೆ. ಕಾಂಗ್ರೆಸ್ಸಿನ ಈಗಿನ ಚರ್ಚೆಗೆ ಸಂಬಂಧಿಸಿ ಆಮ್ ಆದ್ಮಿಯ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಈ ವರೆಗೂ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.