ಸುಳ್ಳು ಸುದ್ದಿ ಪ್ರಸಾರ; ಆಜ್‌ತಕ್‌ನ ಸುಧೀರ್ ಚೌಧರಿ ವಿರುದ್ಧ ಎಫ್ಐಆರ್

0
622

ಸನ್ಮಾರ್ಗ ವಾರ್ತೆ

ಕರ್ನಾಟಕ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಆಜ್‌ತಕ್ ವಾಹಿನಿ ಹಾಗೂ ಪ್ರಧಾನ ಸಂಪಾದಕ ಸುಧೀರ್ ಚೌಧರಿಯ ವಿರುದ್ಧ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸುಳ್ಳು ಸುದ್ದಿ ಮಾತ್ರವಲ್ಲದೆ, ದುರುದ್ದೇಶಪೂರ್ವಕವಾಗಿ ಕೋಮು ಪ್ರಚೋದನೆ ನೀಡಿರುವ ಆರೋಪ ಕೂಡಾ ಇದ್ದು ಎಫ್ಐಆರ್ ದಾಖಲಾಗಿದೆ.

ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಾಯಿದೆ 1860 (U/s-505,153A) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ನಲ್ಲಿ ಆಜ್‌ತಕ್ ವಾಹಿನಿಯ ಪ್ರಧಾನ ಸಂಪಾದಕ ಎ1 ಆರೋಪಿಯಾಗಿ ಹಾಗೂ ಆಜ್‌ತಕ್ ವಾಹಿನಿ ಎ2 ಆರೋಪಿಗಳಾಗಿದ್ದಾರೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಹಾಯಕ ಆಡಳಿತಾಧಿಕಾರಿ ಶಿವಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದರು.

ನಿರುದ್ಯೋಗಿ ಯುವಕರಿಗೆ ಸ್ವಾವಲಂಬಿ ಬದುಕಿಗೆ ಆಟೋ, ಗೂಡ್ಸ್, ಟ್ಯಾಕ್ಸಿ ಖರೀದಿಗೆ ಶೇ.50 ರಷ್ಟು ಅಂದರೆ ಗರಿಷ್ಟ 3ಲಕ್ಷ ರೂ. ವರೆಗೆ ಸಬ್ಸಿಡಿ ನೀಡುವ ಯೋಜನೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಷ್ಟೇ ಅಲ್ಲದೆ ದೇವರಾಜ ಅರಸು ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಆದಿ ಜಂಬಾವ ಅಭಿವೃದ್ಧಿ ನಿಗಮದಲ್ಲೂ ಇದೆ. ಅಲ್ಪಸಂಖ್ಯಾತ ಸಮುದಾಯ ಅಷ್ಟೇ ಅಲ್ಲದೆ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸೇರಿ ಹಿಂದೂ ಸಮುದಾಯದ ನಿರುದ್ಯೋಗಿ ಯುವಕರಿಗೂ ಅನುಷ್ಠಾನದಲ್ಲಿದೆ. ಈ ಯೋಜನೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಜಾರಿ ಮಾಡಿದ್ದಲ್ಲ, ಹಿಂದಿನ ಬಿಜೆಪಿ ಸರ್ಕಾರದಲ್ಲೂ ಜಾರಿಯಲ್ಲಿತ್ತು.

ಆದರೆ ಸುದ್ದಿ ವಾಹಿನಿಯಲ್ಲಿ ಇದನ್ನು ತಿರುಚಿ ಕೇವಲ ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಅಷ್ಟೇ ಜಾರಿಯಲ್ಲಿದೆ. ಹಿಂದೂಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸುದ್ದಿ ಪ್ರಸಾರ ಮಾಡಿದ್ದು ಇದು ಸುಳ್ಳು ಹಾಗೂ ದುರುದ್ದೇಶ ಪೂರಿತ ಉದ್ದೇಶದಿಂದ ಕೂಡಿದೆ. ಇದು ಸಮಾಜದಲ್ಲಿ ಕೋಮು ಭಾವನೆ ಕೆರಳುವಂತ ಮಾಡುವ ಉದ್ದೇಶ ಹೊಂದಿದೆ. ಹೀಗಾಗಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.