ಸನ್ಮಾರ್ಗ ವಾರ್ತೆ
ಪಂಜಿಮ್: ಮಸೀದಿ ದರ್ಶನ ಕಾರ್ಯಕ್ರಮದ ಬಳಿಕದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಗೋವಾ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್ಐಒ), ಮಂಗಳವಾರ ವಾಸ್ಕೋದ ದಾಬೋಲಿಮ್ನಲ್ಲಿ ವಿಎಚ್ಪಿ ಮಾಡಿದ ಆರೋಪಗಳೆಲ್ಲವೂ ಆಧಾರ ರಹಿತವಾಗಿವೆ ಮತ್ತು ಅಂತಹ ಯಾವುದೇ ಕಡ್ಡಾಯ ಕಾರ್ಯ ಅಥವಾ ಹಿಜಾಬ್ ಧರಿಸಲು ಯಾರನ್ನು ಒತ್ತಾಯಿಸಿಲ್ಲ ಎಂದು ಹೇಳಿದೆ. ವಿದ್ಯಾರ್ಥಿಗಳ ಮಸೀದಿ ದರ್ಶನ ಕಾರ್ಯಕ್ರಮವು ಕೋಮು ಸೌಹಾರ್ದ ಮತ್ತು ಸಹೋದರತ್ವವನ್ನು ಬಲಪಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಸ್ಐಒ ಗೋವಾ ರಾಜ್ಯಾಧ್ಯಕ್ಷ ಉಸ್ಮಾನ್ ಖಾನ್, “ಎಸ್ಐಒ ಗೋವಾ ಸುಮಾರು ಒಂದು ದಶಕದಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಈ ಎಲ್ಲಾ ಕಾರ್ಯಕ್ರಮಗಳ ಚಟುವಟಿಕೆಯ ಮುಖ್ಯ ಉದ್ದೇಶ ಇಸ್ಲಾಮ್ ಧರ್ಮದ ಕುರಿತು ದೇಶಭಾಂದವರಲ್ಲಿರುವ ತಪ್ಪುಕಲ್ಪನೆಗಳನ್ನು ನಿವಾರಿಸುವುದಾಗಿದೆ.
ಮಸೀದಿಯೊಳಗೆ ಏನಾಗುತ್ತದೆ ಎಂಬುದು ವಿದ್ಯಾರ್ಥಿಗಳಲ್ಲಿರುವ ಸಾಮಾನ್ಯ ಪ್ರಶ್ನೆಯಾಗಿದೆ ಎಂದು ಹೇಳಿದ ಅವರು, ಮಹಿಳೆಯರು ಮಸೀದಿಗೆ ಏಕೆ ಪ್ರವೇಶಿಸಬಾರದು (ಮಹಿಳೆಯರು ಮಸೀದಿ ಪ್ರವೇಶಿಸಬಹುದು) ಮತ್ತು ಹೀಗೆ ಹಲವು ಪ್ರಶ್ನೆಗಳಿರುವಾಗ, ಈ ಎಲ್ಲಾ ಅನುಮಾನಗಳನ್ನು ನಿವಾರಿಸಲು ಮತ್ತು ಸೌಹಾರ್ದ ವಾತಾವರಣನ್ನು ನಿರ್ಮಿಸಲು SIO ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
“ಶಾಂತಿ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಎಲ್ಲಾ ಸಮುದಾಯಗಳು ಪರಸ್ಪರರ ನಂಬಿಕೆಗಳು ಮತ್ತು ಆಚರಣೆಗಳನ್ನು ಅರಿತುಕೊಳ್ಳುವುದು ಅತ್ಯಗತ್ಯ ಎಂದು ಎಸ್ಐಒ ನಂಬುತ್ತದೆ. ಎಸ್ಐಒನ ‘ಮಸೀದಿ ದರ್ಶನ’ ಅದರ ಒಂದು ಮುಂದುವರಿದ ಭಾಗವಾಗಿದೆ. ಈ ಕಾರ್ಯಕ್ರಮಗಳ ಮೂಲಕ ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುವುದು ಮತ್ತು ಭಾಂದವ್ಯವನ್ನು ಬಲಪಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಖಾನ್ ಹೇಳಿದರು.
ವಾಸ್ಕೋದ ದಾಬೋಲಿಮ್ ನಲ್ಲಿ ನಡೆದ ಘಟನೆಯನ್ನು ಒಂದು ಸಣ್ಣ ವರ್ಗವು ರಾಜಕೀಯ ಲಾಭಕ್ಕಾಗಿ ನಕಾರಾತ್ಮಕವಾಗಿ ಚಿತ್ರಿಸಿರುವುದು ದುರದೃಷ್ಟಕರ ಎಸ್ಐಓ ರಾಜ್ಯಾಧ್ಯಕ್ಷ ಹೇಳಿದರು.
“ತಪ್ಪುಕಲ್ಪನೆಗಳನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗುತ್ತಿದೆ ಮತ್ತು ಜನರನ್ನು ಒಂದಾಗಿಸುವ ಇಂತಹ ಸೌಹಾರ್ದ ಕಾರ್ಯಕ್ರಮಗಳನ್ನು ಕೆಡಿಸುವ ಪ್ರಯತ್ನವಾಗಿದೆ ಇದೆಂದು ಖಾನ್ ಹೇಳಿದರು.”
ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿದ್ದಕ್ಕಾಗಿ ವಾಗ್ದಂಡನೆಗೆ ಗುರಿಯಾಗಿರುವ ಪ್ರಾಂಶುಪಾಲರ ಅಮಾನತ್ತನ್ನು ಹಿಂಪಡೆಯುವಂತೆ ದಾಬೋಲಿಮ್ನ ಕೇಶವ ಸ್ಮೃತಿ ಹೈಯರ್ ಸೆಕೆಂಡರಿ ಶಾಲೆಯ ಆಡಳಿತ ಮಂಡಳಿಗೆ ಖಾನ್ ಮನವಿ ಮಾಡಿದ್ದಾರೆ.
“ಸಮಾಜದಲ್ಲಿ ಕೋಮುವಾದ ಹಾಗೂ ದಾರಿ ತಪ್ಪಿಸುವ ಪ್ರಚಾರ ಮತ್ತು ಪ್ರವೃತ್ತಿಗಳಿಗೆ ನಾವು ಬಲಿಯಾಗಬಾರದು. ವಿದ್ಯಾರ್ಥಿಗಳು ದೇವಾಲಯಗಳು, ಚರ್ಚ್ಗಳು, ಮಸೀದಿಗಳು, ಗುರುದ್ವಾರಗಳು ಇತ್ಯಾದಿಗಳಿಗೆ ಭೇಟಿ ನೀಡುವ ಇಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸುವಂತೆ ಎಸ್ಐಒ ಶಿಕ್ಷಣ ನಿರ್ದೇಶನಾಲಯಕ್ಕೆ ಮನವಿ ಮಾಡುತ್ತದೆ. ಇದರಿಂದ ಕೋಮು ಸೌಹಾರ್ದತೆ ಮೇಲುಗೈ ಸಾಧಿಸುತ್ತದೆ ಮತ್ತು ಸಮುದಾಯಗಳ ನಡುವೆ ಉತ್ತಮ ಸಂಬಂಧ ಬೆಳೆಯುತ್ತದೆ” ಎಂದು ಖಾನ್ ಹೇಳಿದರು.
ನಡೆದದ್ದೇನು?
ವಿದ್ಯಾರ್ಥಿಗಳನ್ನು ಮಸೀದಿಗೆ ಕಾರ್ಯಾಗಾರಕ್ಕೆ ಕರೆದೊಯ್ದ ಪ್ರಾಂಶುಪಾಲರನ್ನು ಅಮಾನತುಗೊಳಿಸಿದ ಘಟನೆ ದಕ್ಷಿಣ ಗೋವಾದಲ್ಲಿ ನಡೆದಿದೆ.
ಕೇಶವ್ ಸ್ಮೃತಿ ಹೈಯರ್ ಸೆಕೆಂಡರಿ ಶಾಲೆಯ 11ನೇ ತರಗತಿಯ ವಿದ್ಯಾರ್ಥಿಗಳನ್ನು ಮಸೀದಿಗೆ ಕಾರ್ಯಾಗಾರಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಶಾಲಾ ಆಡಳಿತ ಮಂಡಳಿಯು ಪ್ರಾಂಶುಪಾಲರನ್ನು ಅಮಾನತುಗೊಳಿಸಿದೆ.
ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು, ದೇಶವಿರೋಧಿ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರ ವಿರುದ್ಧ ವಾಸ್ಕೋದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಶಿಕ್ಷಣ ಇಲಾಖೆಯ ನಿರ್ದೇಶಕ ಶೈಲೇಶ್ ಜಿಂಗ್ಗೆ ಈ ಕುರಿತು ಮಾತನಾಡಿದ್ದು, ಆಲ್ಲೊ-ಡಬೋಲಿಮ್ನಲ್ಲಿರುವ ಕೇಶವ್ ಸ್ಮೃತಿ ಹೈಯರ್ ಸೆಕೆಂಡರಿ ಶಾಲೆಯ 11 ನೇ ತರಗತಿಯ ವಿದ್ಯಾರ್ಥಿಗಳನ್ನು ಮಸೀದಿಗೆ ಕಾರ್ಯಾಗಾರಕ್ಕೆ ಕರೆದುಕೊಂಡು ಹೋಗಲಾಗಿದೆ. ಈ ಕುರಿತು ಇಲಾಖೆಯು ಶಾಲಾ ಆಡಳಿತ ಮಂಡಳಿಯಿಂದ ವಿವರಣೆ ಕೇಳಿದೆ. ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಶಾಲಾ ಮುಖ್ಯೋಪಾಧ್ಯಾಯ ಶಂಕರ್ ಗಾಂವ ಈ ಕುರಿತು ಮಾತನಾಡಿದ್ದು, ಸ್ಕೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್ಐಒ) ಆಹ್ವಾನದ ಮೇರೆಗೆ ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ದಾಬೋಲಿಮ್ನಲ್ಲಿರುವ ಮಸೀದಿಗೆ ಭೇಟಿ ನೀಡಲಾಗಿದೆ.
ನಮ್ಮ ಶಾಲೆಯ ಮೂವರು ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿ ಸೇರಿದಂತೆ ಒಟ್ಟು 21 ವಿದ್ಯಾರ್ಥಿಗಳನ್ನು ಮಸೀದಿಗೆ ಕರೆದೊಯ್ಯಲಾಗಿತ್ತು. ಮಸೀದಿಯಲ್ಲಿ ಪ್ರಾರ್ಥನೆಯನ್ನು ಎಲ್ಲಿ ನಡೆಸಲಾಗುತ್ತದೆ ಮತ್ತು ಪ್ರವೇಶ-ನಿರ್ಗಮನ ಪ್ರದೇಶಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು. ಕೆಲವು ವಿದ್ಯಾರ್ಥಿಗಳು ಗೌರವಾರ್ಥವಾಗಿ ತಲೆ ಮುಚ್ಚಿಕೊಂಡಿರಬಹುದು. ವಿದ್ಯಾರ್ಥಿಗಳನ್ನು ಹಿಜಾಬ್ ದರಿಸಲು ಅಥವಾ ಇತರ ಆಚರಣೆಗಳನ್ನು ಮಾಡುವಂತೆ ವಂತಪಡಿಸಲಾಗಿದೆ ಎಂಬುವುದು ಶುದ್ಧ ಸುಳ್ಳು ಎಂದು ಹೇಳಿದ್ದಾರೆ.












