ಹೊಸದಿಲ್ಲಿ,ಮಾ. 31: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ತನ್ನ ಹೇಳಿಕೆಯಿಂದಾಗಿ ವಿವಾದದ ಸುಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಸಂವಿಧಾನದ 370ನೆ ವಿಧಿ ತೆಗೆದು ಹಾಕುವ ಕುರಿತ ಕೇಂದ್ರ ಸರಕಾರದ ನಿಲುವಿನ ವಿರುದ್ಧ ಮೆಹಬೂಬ ಮುಫ್ತಿ ಶನಿವಾರ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರ್ ವಿಶ್ವಾಸ್ “ಸುಧಾರಿಸಿಕೊಳ್ಳಿ, ಇದು 1947ರ ಭಾರತ ಅಲ್ಲ” ಎಂದು ಮೆಹಬೂ¨ ಮುಫ್ತಿಗೆ ಎಚ್ಚರಿಕೆ ನೀಡಿದ್ದಾರೆ.
ಮುಫ್ತಿಯವರ ಹೇಳಿಕೆಗೆ ರಿಟ್ವೀಟ್ ಮಾಡಿದ ಕುಮಾರ್ ವಿಶ್ವಾಸ್ ನಿಮ್ಮಂತಹವರ ಗೊಡ್ಡು ಬೆದರಿಕೆಗೆ ಸೊಪ್ಪುಹಾಕಿ ದೇಶದ ನಕ್ಷೆಯ ಕುರಿತು ಯೋಚಿಸಲು ಇದು 1947ರ ಭಾರತ ಅಲ್ಲ. ಯಾವನೇ ರಾಜಕಾರಣಿ ಈಗ ಇಂತಹ ಮಾತಾಡಿದರೆ ಈ ದೇಶ ಅವರ ಮೂಲವನ್ನೇ ಕಿತ್ತೆಸೆಯಲಿದೆ. ಸಮಯ ಇರುವಾಗಲೇ ಸುಧಾರಿಸಿಕೊಳ್ಳಿ. ನಂತರ ಸಮಯವೇ ಇಲ್ಲದ ಪರಿಸ್ಥಿತಿಯಾಗಬಹುದು ಎಂದು ಕುಮಾರ್ ವಿಶ್ವಾಸ್ ಬುದ್ಧಿವಾದ ಹೇಳಿದ್ದಾರೆ.
ಸಂವಿಧಾನದ 370ನೆ ವಿಧಿಯನ್ನು ಕೇಂದ್ರ ಸರಕಾರ ಕೊನೆಗೊಳಿಸಿದರೆ ಭಾರತದೊಂದಿಗಿನ ನಮ್ಮ ಸಂಬಂಧ ಕೂಡ ಕೊನೆಗೊಳ್ಳಬಹುದು. ನಾವು ನಿಮ್ಮೊಂದಿಗೆ ಯಾವ ಶರ್ತಗಳೊಂದಿಗೆ ಬಂದಿದ್ದೆವೋ. ಆ ಶರ್ತ ಕೊನೆಗೊಂಡರೆ ನಾವು ಮರುಚಿಂತನೆ ನಡೆಸಬೇಕಾಗುತ್ತದೆ. ನಾವು ನಿಮ್ಮೊಂದಿಗೆ ನಿಶ್ಶರ್ತವಾಗಿ ಇರಬಯಸುವುದಿಲ್ಲ ಎಂದು ಕೇಂದ್ರ ಸರಕಾರಕ್ಕೆ ಶನಿವಾರ ಮೆಹಬೂಬ ಮುಫ್ತಿ ಎಚ್ಚರಿಕೆ ನೀಡಿದ್ದರು.
ಈ ಹಿಂದೆ ಮೆಹಬೂಬ ಮುಫ್ತಿ ಬಿಜೆಪಿಯೊಂದಿಗೆ ಸೇರಿ ಜಮ್ಮು ಕಾಶ್ಮೀರದಲ್ಲಿ ಸರಕಾರ ರಚಿಸಿ ಮುಖ್ಯಮಂತ್ರಿಯಾಗಿದ್ದರು. ಇತ್ತೀಚೆಗಿನ ದಿನಗಳಲ್ಲಿ ದೇಶದ ಸಾರ್ವಭೌಮತ್ವದ ವಿರುದ್ಧ ಹಲವು ಹೇಳಿಕೆ ನೀಡಿ ಅವರು ವಿವಾದ ಸೃಷ್ಟಿಸಿದ್ದಾರೆ.












