ಸನ್ಮಾರ್ಗ ವಾರ್ತೆ
ದೀಪಕ್ಕೆ ಯಾವ ಜಾತಿ, ಪಂಥ, ಧರ್ಮವಿಲ್ಲ. ಕತ್ತಲೆಯನ್ನು ನಿವಾರಿಸಬೇಕು ಎನ್ನುವ ಉದ್ದೇಶ ಮಾತ್ರ ದೀಪದ್ದು, ಹೀಗಿರುವಾಗ ದೀಪಾವಳಿಯಲ್ಲಿ ಬೆಳಗಬೇಕಾಗಿರುವುದು ದೀಪವಲ್ಲ, ಮನಸ್ಸುಗಳು ಎಂದು ಕೆಂದ್ರೀಯ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಸರ್ಪಂಗಳ ಈಶ್ವರ ಭಟ್ ಅಭಿಪ್ರಾಯಪಟ್ಟರು.
ಪೊಸಕುರಲ್ ಬಳಗ, ಉಳ್ಳಾಲ ಸದ್ಭಾವನಾ ವೇದಿಕೆ, ಕೊಲ್ಯ ಬಿಲ್ಲವ ಸೇವಾ ಸಮಾಜ ಟ್ರಸ್ಟ್, ಬಿಲ್ಲವ ಸೇವಾ ಸಮಾಜ, ರೋಟರಿ ಸಮುದಾಯ ದಳ, ಕೊಲ್ಯ – ಸೋಮೇಶ್ವರ ಯುವವಾಹಿನಿ, ಉಳ್ಳಾಲ
ಜಮಾಅತೆ ಇಸ್ಲಾಮಿ ಹಿಂದ್, ಉಳ್ಳಾಲ ಬೈಲ್ ನವೋದಯ ಫ್ರೆಂಡ್ಸ್ ಇದರ ಸಹಭಾಗಿತ್ವದಲ್ಲಿ ಶುಕ್ರವಾರ ಕೊಲ್ಯ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ‘ಸೌಹಾರ್ದ ದೀಪಾವಳಿ ಸಂಗಮ’ದಲ್ಲಿ ಸೌಹಾರ್ದ ಸಂದೇಶ ನೀಡಿದರು.
ಉಳ್ಳಾಲ ಸದ್ಭಾವನಾ ವೇದಿಕೆಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಮಾತನಾಡಿ, ಯಾವುದೇ ಧರ್ಮದಲ್ಲಿ ಕೆಡುಕು ಭೋದಿಸಿಲ್ಲ, ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅಶಾಂತಿ ಸೃಷ್ಟಿಸಿದ್ದಾನೆ. ಹಬ್ಬದ ಶುಭ ದಿನದಲ್ಲಿ ಎಲ್ಲರೂ ಒಂದೇ ಮನಸ್ಸಿನಿಂದ ಶ್ರಮಿಸಿದರೆ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯ ಎಂದರು.
ಈ ಸಂದರ್ಭ ಉಳ್ಳಾಲ ವ್ಯಾಪ್ತಿಯ ರಾಜ್ಯೋತ್ಸವ ಪುರಸ್ಕೃತರನ್ನು ಅಭಿನಂದಿಸಲಾಯಿತು.
ನಿವೃತ್ತ ಸೇನಾನಿ ಕೃಷ್ಣ ಗಟ್ಟಿ ಅಡ್ಕ ಅಧ್ಯಕ್ಷತೆ ವಹಿಸಿದ್ದರು. ಜಮಾಅತೆ ಇಸ್ಲಾಮಿ ಹಿಂದ್ ದ.ಕ. ಮತ್ತು ಉಡುಪಿ ವಲಯ ಸಂಚಾಲಕ ಸಯೀದ್ ಇಸ್ಮಾಯಿಲ್, ದ.ಕ. ಜಿಲ್ಲಾ ಡೇನಲ್ಮ್ ಯೋಜನೆಯ ವ್ಯವಸ್ಥಾಪಕಿ ಐರಿನ್ ರೆಬೆಲ್ಲೊ, ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು, ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ಶ್ರೀ ಚಿರುಂಭ ಭಗವತೀ ಕ್ಷೇತ್ರದ ಉಪಾಧ್ಯಕ್ಷ ಸುರೇಶ್ ಭಟ್ನಗರ, ಪಾನೀರ್ ಚರ್ಚ್ ವಿನ್ಸೆಂಟ್ ಪೌಲ್ ಸಂಸ್ಥೆಯ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ದ.ಕ. ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಉಳ್ಳಾಲ ಜಮಾಅತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಎ.ಎಚ್.ಮೆಹಮೂದ್, ಕೊಲ್ಯ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ್ ಕೊಲ್ಯ, ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಹರೀಶ್ ಮುಂಡೋಳಿ, ಕೊಲ್ಯ , ಯುವವಾಹಿನಿ ಉಪಾಧ್ಯಕ್ಷೆ ಶ್ರೀಮತಿ ಸುಧಾ ಸುರೇಶ್, ಉಳ್ಳಾಲಬೈಲ್ ನವೋದಯ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಪದ್ಮನಾಭ ಉಳ್ಳಾಲಬೈಲ್, ರೋಟರಿ ಸಮುದಾಯ ದಳದ ಅಧ್ಯಕ್ಷ ಆನಂದ ಮಲಯಾಳ ಕೋಡಿ ಮೊದಲಾದವರು ಉಪಸ್ಥಿತರಿದ್ದರು.
ಭಾರತಿ ಸುನಿಲ್, ಸೌಮ್ಯ ಕುಸುಮಾಕರ್ ಪ್ರಾರ್ಥನೆಗೈದರು. ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾಶಿವ ಆಳ್ವ ತಲಪಾಡಿ ಬಲಿಯೇಂದ್ರ ಲೆಪ್ಪು ನಡೆಸಿಕೊಟ್ಟರು. ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು. ಕುಸುಮಾಕರ್ ಕುಂಪಲ ವಂದಿಸಿದರು.











