ಅಮರಾವತಿ,ಎ.6: ತಾನು ಎರಡು ದಿವಸಗಳೊಳಗೆ ಬಂಧಿಸಲ್ಪಡಬಹುದು ಎಂದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯಿಡು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ನಾಳೆ ಅಥವಾ ನಾಡಿದ್ದು ಅವರು ತನ್ನನ್ನು ಬಂಧಿಸಬಹುದು. ಅದಕ್ಕೆ ಅವರಿಗೆ ಅವಕಾಶ ನೀಡಿ, ನಾನು ಜೈಲಿಗೆ ಹೋಗುವೆ. ಆದರೆ ಶರಣಾಗಲು ಸಿದ್ಧನಿಲ್ಲ ಎಂದು ವಿಶಾಖಪಟ್ಟಣದ ಚುನಾವಣಾ ರ್ಯಾಲಿಯಲ್ಲಿ ಮಾತಾಡುತ್ತಾ ಹೇಳಿದರು.
ರಾಜ್ಯ ಸಭಾ ಸಂಸದ ಮತ್ತು ನಾಯಿಡುರ ನಿಕಟ ಸಹಾಯಕ ಸಿಎಂ ರಮೇಶ್ರ ಕಡಪದ ವಸತಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದರು. ಅದರ ಬೆನ್ನಿಗೆ ಟಿಡಿಪಿ ನಾಯಕರು ಮತ್ತು ಅಭ್ಯರ್ಥಿಗಳಿಗೆ ತೊಂದರೆ ನೀಡತೊಡಗಿದ್ದಾರೆ. ಪ್ರಧಾನಿ ಮೋದಿ ಕೇಂದ್ರ ಏಜೆನ್ಸಿಗಳನ್ನು ದುರುಪಯೋಗಿಸುತ್ತಿದ್ದಾರೆ ಎಂದು ನಾಯಿಡು ಟೀಕಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ, ಎನ್ಫೋರ್ಸ್ಮೆಂಟ್ ಡೈರಕ್ಟರೇಟ್(ಇಡಿ), ಸಿಬಿಐ, ಆರ್ಬಿಐ ಏಜೆನ್ಸಿಗಳನ್ನು ಉಪಯೋಗಿಸಿ ಪ್ರಜಾಪ್ರಭುತ್ವವನ್ನು ಮೋದಿ ಅಪಮಾನಿಸುತ್ತಿದ್ದಾರೆ ಎಂದು ನಾಯಿಡು ಹೇಳಿದರು. ಮುಖ್ಯ ಕಾರ್ಯದರ್ಶಿ ಅನಿಲ್ ಚಂದ್ರ ಪುನೆತರನ್ನು ಚುನಾವಣಾ ಆಯೋಗ ಬದಲಾಯಿಸಿದ ಕ್ರಮವನ್ನು ಕೂಡ ಚಂದ್ರಶೇಖರ ಬಾಬು ನಾಯಿಡು ಟೀಕಿಸಿದರು. ಚುನಾವಣಾ ಆಯೋಗ ಮೋದಿಯ ಆದೇಶವನ್ನು ಜಾರಿಗೊಳಿಸುತ್ತಿದೆ ಎಂದು ಅವರು ಆರೋಪಿಸಿದರು.












